ಕೋಟ, ಏ.11: ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಐ,ಕ್ಯೂ.ಎ.ಸಿ., ಯುವ ರೆಡ್‌ಕ್ರಾಸ್, ಎನ್.ಎಸ್.ಎಸ್ ಘಟಕ ಮತ್ತು ಮಹಿಳಾ ಸಂಘವು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮೆಡಿಕಲ್ ಆಂಕೊಲಾಜಿ ವಿಭಾಗ ಮುಖ್ಯಸ್ಥ ಮತ್ತು ಪ್ರೊಫೆಸರ್ ಡಾ. ಅನಂತ್ ಪೈ ಅವರು ವಿವಿಧ ಪ್ರಕಾರದ ಕ್ಯಾನ್ಸರ್ ಕಾಯಿಲೆಗಳು ಮತ್ತು ಅವುಗಳನ್ನು ಗುಣಪಡಿಸಲು ಇರುವ ಚಿಕಿತ್ಸೆ ಮತ್ತು ಔಷಧಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಉತ್ತಮ ಜೀವನ ಶೈಲಿಯಿಂದ ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ತುತ್ತಾಗುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಪ್ರೊ. ಸುನೀತ ವಿ ವಿದ್ಯಾರ್ಥಿಗಳಿಗೆ ಆರೋಗ್ಯದ ಕಡೆ ಹೆಚ್ಚು ಗಮನ ಕೊಡುವಂತೆ ಕರೆ ನೀಡಿದರು. ಐ.ಕ್ಯೂ.ಎ.ಸಿ ಸಂಚಾಲಕರಾದ ಡಾ. ಸುಬ್ರಹ್ಮಣ್ಯ ಎ., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಶಂಕರ ನಾಯ್ಕ ಬಿ ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಮುರಳಿ ಎಂ.ಜಿ ಸ್ವಾಗತಿಸಿ, ವಾಣಿಜ್ಯಶಾಸ್ತ್ರ ಉಪನ್ಯಾಸಕ ಶ್ರೀಕಾಂತ್ ಎ ಪೂಜಾರಿ ವಂದಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.