ಉಡುಪಿ, ಏ.6: ಲೋಕಸಭಾ ಚುನಾವಣೆ ಪಾರದರ್ಶಕವಾಗಿ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಭಾರತೀಯ ಚುನಾವಣಾ ಆಯೋಗದ ನಿಯಮಾನುಸಾರ ಜರಗಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ವೀಕ್ಷಕ ಹಿತೇಶ್ ಕೆ ಕೋಯಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಶನಿವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್‌ನ ಡಾ. ವಿ. ಎಸ್ ಆಚಾರ್ಯ ಸಭಾಂಗಣದಲ್ಲಿ ಉಡುಪಿ- ಚಿಕ್ಕಮಗಳೂರು ಲೋಕಸಭೆ ಚುನಾವಣೆ-2024 ರ ಸಿದ್ದತೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ತಡೆಗೆ ರೂಪಿಸಿರುವ ವಿವಿಧ ತಂಡಗಳ ಅಧಿಕಾರಿಗಳಿಗೆ ಹಾಗೂ ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಪ್ರತಿಯೊಬ್ಬ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ ತರಬೇತಿ ನೀಡುವಾಗ ಎಲ್ಲಾ ರೀತಿ ಸಾಧಕ ಭಾದಕಗಳ ಕುರಿತು ಸವಿಸ್ತಾರ ಮಾಹಿತಿಯನ್ನು ನೀಡಬೇಕು ಎಂದು ಸಲಹೆ ನೀಡಿದರು. ಮತಯಂತ್ರಗಳ ಲಭ್ಯತೆ, ವಿಧಾನಸಭೆ ಕ್ಷೇತ್ರವಾರು ವಿತರಣೆ ಸೇರಿದಂತೆ ಮತ್ತಿತರ ಸಿದ್ಧತೆ ಕುರಿತು ಮಾಹಿತಿ ಪಡೆದು ಮಾತನಾಡಿ, ಮತಯಂತ್ರಗಳ ನಿರ್ವಹಣೆ ವ್ಯವಸ್ಥಿತವಾಗಿ ಆಗಬೇಕು ಯಾವುದೇ ರೀತಿಯ ಗೊಂದಗಳಿಗೆ ಅವಕಾಶ ನೀಡದಂತೆ ಜಾಗೃತಿ ವಹಿಸಬೇಕೆಂದು ಸೂಚನೆ ನೀಡಿದರು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವೆಚ್ಚ ವೀಕ್ಷಕ ಅಲೋಕ್ ಕುಮಾರ್, ಮಾತನಾಡಿ ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸಲು ಎಲ್ಲಾ ಅಧಿಕಾರಿಗಳು ಸಮನ್ವದೊಂದಿಗೆ ಕಾರ್ಯನಿರ್ವಾಹಿಸಬೇಕು ಚುನಾವಣೆ ಆಯೋಗ ನೀಡಿರುವ ನಿರ್ದೇಶನಗಳನ್ನು ಚಾಚು ತಪ್ಪಾದೆ ಪಾಲಿಸಬೇಕು. ನಿಗಧಿತ ನಮೋನೆಗಳ ದಾಖಲೆಗಳನ್ನು ನಿರ್ವಹಣೆ ಮಾಡಬೇಕು ಎಂದರು. ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಮಾತನಾಡಿ, ಜಿಲ್ಲೆಯ ಮತದಾರರ ವಿವರ, ಮತಗಟ್ಟೆಗಳ ಸಂಖ್ಯೆ, ಚುನಾವಣಾ ಕಾರ್ಯಗಳಿಗೆ ನಿಯೋಜಿಸಿಕೊಂಡ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ವಿವರ, ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ತಡೆಯಲು ರೂಪಿಸಿದ ವಿವಿಧ ತಂಡಗಳ ವಿವರ, ಚೆಕ್‌ಪೋಸ್ಟ್ ನಿರ್ಮಾಣ ಮಾಡಿರುವ ಬಗ್ಗೆ, ಇ.ವಿ.ಎಂ ಹಂಚಿಕೆ ಸೇರಿದಂತೆ ನ್ಯಾಯ ಸಮ್ಮತ ಚುನಾವಣೆ ನಡೆಸಲು ಮಾಡಿಕೊಂಡಿರುವ ತಯಾರಿಗಳ ವಿವರಗಳನ್ನು ಸವಿಸ್ತಾರವಾಗಿ ವಿವರಿಸಿದರು ಹಾಗೂ ಚುನಾವಣೆಯಲ್ಲಿ ಮತದಾನವನ್ನು ಹೆಚ್ಚಿಸಲು ಕೈಗೊಂಡಿರುವ ಜಾಗೃತಿ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.
ಸಭೆಯಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನವಣಾಧಿಕಾರಿ ಮೀನಾ ನಾಗರಾಜ್, ಪೊಲೀಸ್ ವೀಕ್ಷಕಿ ಬಿನಿತ ಠಾಕೂರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್, ಚಿಕ್ಕಮಗಳೂರು ಜಿಲ್ಲೆಯ ಸಿ.ಇ.ಓ ಗೋಪಾಲಕೃಷ್ಣ ಬಿ, ಎಸ್.ಪಿ ಡಾ. ಅರುಣ್ ಕೆ, ಚಿಕ್ಕಮಗಳೂರು ಎಸ್‌ಪಿ ವಿಕ್ರಮ್ ಅಮಾಠೆ, ಕರಾವಳಿ ಕಾವಲು ಪಡೆಯ ಎಸ್.ಪಿ ಮಿಥುನ್ ಹೆಚ್.ಎನ್, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ. ಎಸ್, ಡಿ.ಎಫ್.ಓ ಗಣಪತಿ, ಜಿಲ್ಲಾ ಮಟ್ಟದ ವಿವಿಧ ನೋಡಲ್ ಅಧಿಕಾರಿಗಳು, ಹಾಗೂ ಮತ್ತಿತರರು ಉಪಸ್ಥಿತರಿದ್ದರು.