ಶಿರ್ವ, ಏ.5: ಶಿರ್ವದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನಲ್ಲಿ ಶುಕ್ರವಾರ ವಿದ್ಯಾಸಂಸ್ಥೆಯ ಸಂಸ್ಥಾಪಕರ ಸ್ಮರಣಾರ್ಥ ನಡೆಯುವ 43ನೇ ವಿಶ್ವವಿದ್ಯಾಲಯ ಮಟ್ಟದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಸ್ಮಾರಕ ಪುರುಷರ ಹಾಗೂ ಮಹಿಳೆಯರ ವಾಲಿಬಾಲ್ ಪಂದ್ಯಾವಳಿ ನಡೆಯಿತು. ವಿದ್ಯಾವರ್ಧಕ ಸಂಘ (ರಿ). ಶಿರ್ವದ ಸಂಚಾಲಕರಾದ ವಿ. ಸುಬ್ಬಯ್ಯ ಹೆಗ್ಡೆ ಇವರ ಅಧ್ಯಕ್ಷತೆಯಲ್ಲಿ, ಪಂದ್ಯಾವಳಿಯನ್ನು ಬ್ಯಾಂಕ್ ಆಫ್ ಬರೋಡ ಉಡುಪಿ ಉಪಪ್ರಾದೇಶಿಕ ಮುಖ್ಯಸ್ಥರಾದ ಪಿ. ವಿದ್ಯಾಧರ ಶೆಟ್ಟಿ ಉದ್ಘಾಟಿಸಿದರು. ಶಿಕ್ಷಣ ಸಂಸ್ಥೆ ಮತ್ತು ಬ್ಯಾಂಕಿನ ಜೊತೆಗಿನ 43 ವರ್ಷದ ಸುದೀರ್ಘ ಒಡನಾಟದ ಕುರಿತು ಅನುಭವ ಹಂಚಿ, ಕ್ರೀಡಾಪಟುಗಳಿಗೆ ಸೋಲೇ ಗೆಲುವಿನ ಮೆಟ್ಟಿಲು ಎಂದರು.
ವಿದ್ಯಾವರ್ಧಕ ಸಂಘ (ರಿ.), ಶಿರ್ವದ ಆಡಳಿತಾಧಿಕಾರಿ ಪ್ರೊ. ವೈ. ಭಾಸ್ಕರ್ ಶೆಟ್ಟಿ, ಮುಖ್ಯ ಅತಿಥಿಯಾಗಿ ಬ್ಯಾಂಕ್ ಆಫ್ ಬರೋಡ-ಶಿರ್ವ ಶಾಖೆ ಮುಖ್ಯ ವ್ಯವಸ್ಥಾಪಕ ಅತೀಶ್ ಅಂತೋನಿ, ಹಾಗೂ ಕಾಲೇಜಿನ ದೈಹಿಕ ನಿರ್ದೇಶಕಿ ಸೌಮ್ಯ ಶೆಟ್ಟಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಮಿಥುನ್ ಚಕ್ರವರ್ತಿ ಸ್ವಾಗತಿಸಿ ಡಾ. ಸೋನಾ ಹೆಚ್.ಸಿ ವಂದಿಸಿದರು. ಪಂದ್ಯಾವಳಿಯಲ್ಲಿ 17 ತಂಡಗಳು ಭಾಗವಹಿಸಿದ್ದು, ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಎಸ್.ಡಿ.ಎಮ್ ಕಾಲೇಜು-ಉಜಿರೆ ಮತ್ತು ದ್ವಿತೀಯ ಸ್ಥಾನವನ್ನು ಶಾರದಾ ಕಾಲೇಜು- ಬಸ್ರೂರಿನ ವಿದ್ಯಾರ್ಥಿಗಳು ಮುಡಿಗೇರಿಸಿಕೊಂಡರು. ಮಹಿಳೆಯರ ವಿಭಾಗದಲ್ಲಿ ಎಸ್.ಡಿ.ಎಮ್ ಕಾಲೇಜು-ಉಜಿರೆ ಮೊದಲ ಸ್ಥಾನ ಮತ್ತು ಎಂ.ಎಸ್.ಆರ್.ಎಸ್ ಕಾಲೇಜು-ಶಿರ್ವ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ವಿಜೇತ ತಂಡಗಳಿಗೆ ಶಿರ್ವ ಆರಕ್ಷಕ ಠಾಣೆಯ ಸಬ್ ಇನ್ಸ್ಪೆಕ್ಟರ್ ಶಕ್ತಿವೇಲು ಇ. ಬಹುಮಾನ ವಿತರಿಸಿದರು.