ಮಣಿಪಾಲ, ಏ.5: ಮತದಾರರ ಜಾಗೃತಿ ಮತ್ತು ನಾಗರಿಕ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಸಂಘಟಿತ ಪ್ರಯತ್ನದಲ್ಲಿ, ಭಾರತ ಚುನಾವಣಾ ಆಯೋಗವು ಉಡುಪಿ ಜಿಲ್ಲಾಡಳಿತ, ಸ್ವೀಪ್ ಸಮಿತಿ ಮತ್ತು ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಉಡುಪಿ ಜಿಲ್ಲೆ, ಆಸರೆ ವಿಶೇಷ ಶಾಲೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಆಶ್ರಯದಲ್ಲಿ ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮ ಶುಕ್ರವಾರ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್ ಅವರು ಮಾತನಾಡಿ, ಮತದಾನ ಕೇವಲ ಹಕ್ಕುಲ್ಲ, ಎಲ್ಲರ ಜವಾಬ್ದಾರಿ ಕೂಡ ಹೌದು ಎಂದು ಒತ್ತಿ ಹೇಳಿದರು. ಮತದಾನದ ರಜೆ ಮೋಜು ಮಸ್ತಿಗೆ ಅಲ್ಲ, ಇದನ್ನು ಸದುಪಯೋಗಪಡಿಸಿಕೊಂಡು ಮತದಾನ ಮಾಡಿ ಎಂದರು. ಎಲ್ಲಾ ಮತದಾರರು ಏಪ್ರಿಲ್ 26 ರ ಉಡುಪಿ-ಚಿಕ್ಕಮಗಳೂರು ಮತ್ತು ಮೇ 7ರ ಶಿವಮೊಗ್ಗ ಲೋಕಸಭಾ ಚುನಾವಣೆಯಂದು ತಪ್ಪದೇ ಮತ ಚಲಾಯಿಸಬೇಕು. ಹಿರಿಯ ನಾಗರಿಕರು ಮತ್ತು ವಿಕಲಚೇತನರು ಪ್ರಜಾಪ್ರಭುತ್ವದ ಪ್ರಮುಖ ಆಧಾರ ಸ್ತಂಭವಾಗಿದ್ದು, ಇವರುಗಳಿಗೆ ಸುಗಮ ಮತದಾನಕ್ಕಾಗಿ ಮತಗಟ್ಟೆಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಚುನಾವಣೆಗೆ ಸಂಬಂಧಿಸಿದ ಯಾವುದೇ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 1950 ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದರು. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅವರು ಮತದಾರರ ಜಾಗೃತಿಯನ್ನು ಬೆಳೆಸುವಲ್ಲಿ ಜಿಲ್ಲಾಡಳಿತದ ಪೂರ್ವಭಾವಿ ಪ್ರಯತ್ನಗಳನ್ನು ಶ್ಲಾಘಿಸಿದರು. ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಇಂತಹ ಉಪಕ್ರಮಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದರು.
ಯೋಜನಾ ಸಹಾಯಕ ಶಿವಾಜಿ ಎ.ಕೆ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ನಿರಂಜನ್ ಭಟ್ ಇವರು ಮತದಾರರ ಜಾಗೃತಿ ಅಭಿಯಾನವನ್ನು ಯಕ್ಷಗಾನ ಪ್ರಸಂಗದ ಮೂಲಕ ಚುನಾವಣೆಯ ಪ್ರಾಮುಖ್ಯತೆ, ವಿಕಲಚೇತನ ಮತದಾರರು ಮತ್ತು ಹಿರಿಯ ನಾಗರಿಕ ಮತದಾರರಿಗೆ ಮತಗಟ್ಟೆಗಳಲ್ಲಿ ಒದಗಿಸಲಾಗುವ ಮೂಲಭೂತ ಸೌಲಭ್ಯಗಳು ಹಾಗೂ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಲು ಸಾಧ್ಯವಾಗದ ಮತದಾರರಿಗೆ ಅಂಚೆ ಮತದಾನದ ಮೂಲಕ ಮತದಾನದ ಸೌಲಭ್ಯ ಒದಗಿಸಿರುವ ಬಗ್ಗೆ ಮಾಹಿತಿ ನೀಡಿದರು. ಕುಂದಾಪುರ ವಾಗ್ಜ್ಯೋತಿ ಶ್ರವಣದೋಷವುಳ್ಳ ವಿಶೇಷ ಶಾಲೆಯ ವಿಶೇಷ ಶಿಕ್ಷಕಿ ಪ್ರಮೀಳ ಸಂಜ್ಞಾ ಭಾಷೆಯ ಮೂಲಕ ಶ್ರವಣದೋಷವುಳ್ಳ ವಿಕಲಚೇತನ ಮತದಾರರಿಗೆ ಕಾರ್ಯಕ್ರಮದ ಕುರಿತು ಅನುವಾದಿಸಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಅನುರಾಧ, ರೊ.ರೇಣು ಜೈರಾಮ್, ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ಡಿ.ಡಿ.ಆರ್.ಸಿ ಸದಸ್ಯ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು, ಆಸರೆ ವಿಶೇಷ ಶಾಲೆಯ ವಿಶೇಷಚೇತನ ಮಕ್ಕಳು, ಕೆ.ಎಂ.ಸಿ ಆಸ್ಪತ್ರೆಯ ಸಿಬ್ಬಂದಿಗಳು, ಆಸ್ಪತ್ರೆಯು ಹೊರರೋಗಿಗಳು ಮತ್ತು ಪೋಷಕರು, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಛೇರಿ, ವಿಕಲಚೇತನರ ಮಾಹಿತಿ/ಸಲಹಾ ಕೇಂದ್ರ ಮತ್ತು ಡಿ.ಡಿ.ಆರ್.ಸಿಯ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕೆ.ಎಂ.ಸಿ ಮಾರ್ಕೆಟಿಂಗ್ ಮ್ಯಾನೇಜರ್ ಮೊಹನ್ ಶೆಟ್ಟಿ ಸ್ವಾಗತಿಸಿ, ಆಸರೆ ವಿಶೇಷ ಶಾಲೆಯ ಮುಖ್ಯ ಶಿಕ್ಷಕ ರಮೇಶ್ ನಾಯ್ಕ್ ನಿರೂಪಿಸಿ,
ಶಾಲೆಯ ಮುಖ್ಯಸ್ಥ ಜೈವಿಠಲ್ ವಂದಿಸಿದರು.