ಮಣಿಪಾಲ, ಏ.2: ‘ದ್ವಮ್ದ್ವ’ ಚಿತ್ರದ ಉದ್ದೇಶವು ಲಿಂಗ ಸಂಬಂಧಿ ವಿಷಯಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವುದಾಗಿದೆ ಎಂದು ನಿರ್ದೇಶಕ ಕ್ಲಿಂಗ್ ಜಾನ್ಸನ್ ಹೇಳಿದರು. ಅವರ ಚಲನಚಿತ್ರ ‘ದ್ವಮ್ದ್ವ’ ಇತ್ತೀಚೆಗೆ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಇವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್), ಆಶ್ರಯದಲ್ಲಿ ಚಲನಚಿತ್ರವನ್ನು ಪ್ರದರ್ಶಿಸಿದ ನಂತರ ವಿದ್ಯಾರ್ಥಿಗಳು ಮತ್ತು ಇತರರೊಂದಿಗೆ ಸಂವಾದ ನಡೆಸಿದರು. ಸಾಂಪ್ರದಾಯಿಕ ಸಮಾಜಗಳು ಲಿಂಗ ಸಂಬಂಧಿ ವಿಷಯಗಳ ಕುರಿತು ಪೂರ್ವಾಗ್ರಹ ಹೊಂದಿವೆ. ಲಿಂಗದ ಬಗ್ಗೆ, ಜ್ಞಾನದ ಬೆಳವಣಿಗೆಯೊಂದಿಗೆ, ನಮ್ಮ ದೃಷ್ಟಿಕೋನವು ಬದಲಾಗಬೇಕು ಮತ್ತು ಅದರಿಂದ ಸಮಾಜಗಳು ಶಿಕ್ಷಣ ಪಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.
‘ದ್ವಮ್ದ್ವ’, ‘ದೀಪವಿರದ ದಾರಿಯಲ್ಲಿ’ (ಲೇಖಕ: ಸುಶಾಂತ್) ಕಾದಂಬರಿ ಆಧಾರಿತ ಚಲನಚಿತ್ರವಾಗಿದ್ದು, ಯುವ ಯಕ್ಷಗಾನ ಕಲಾವಿದನ ಕಥೆಯ ಮೂಲಕ ಇದು ಲಿಂಗ ಸಂಬಂಧೀ ಸಂಕೀರ್ಣತೆಗಳನ್ನು ತೆರೆದಿಡುತ್ತದೆ. ಇದು, ಮೊದಲು ಹಲವಾರು ಕಿರುಚಿತ್ರಗಳನ್ನು ನಿರ್ಮಿಸಿದ ಕ್ಲಿಂಗ್ ಜಾನ್ಸನ್ ಅವರ ಮೊದಲ ಪೂರ್ಣಪ್ರಮಾಣದ ಚಲನಚಿತ್ರವಾಗಿದೆ. ಸ್ವತಃ ಬರಹಗಾರರಾದ ಅವರು ಕಸ್ತೂರ್ಬಾ ಆಸ್ಪತ್ರೆಯಲ್ಲಿ ಅಗ್ನಿಶಾಮಕ ಸುರಕ್ಷತಾ ಅಧಿಕಾರಿಯೂ ಆಗಿದ್ದಾರೆ. ನನ್ನ ಸ್ವಂತ ಸ್ನೇಹಿತರು ಮತ್ತು ಸಹಪಾಠಿಗಳನ್ನು ಒಳಗೊಂಡಿರುವ ಜನರಿಂದ ಕ್ರೌಡ್ ಫಂಡಿಂಗ್ ಮೂಲಕ ಹಣಕಾಸು ಸಂಗ್ರಹಿಸಿ ನಾನು ಈ ಚಲನಚಿತ್ರವನ್ನು ನಿರ್ಮಿಸಿದ್ದೇನೆ ಎಂದು ವಿವರಿಸಿದರು.
ಕಸ್ತೂರ್ಬಾ ಆಸ್ಪತ್ರೆಯ ಸಹಾಯಕ ನಿರ್ದೇಶಕ (ಯೋಜನೆ) ಜಿಬು ಥಾಮಸ್ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡುತ್ತಾ, ಚಿತ್ರಕಲೆಯಂತಹ ಕಲೆಗಳ ಅಗತ್ಯವನ್ನು ಒತ್ತಿ ಹೇಳಿದರು, ಮತ್ತು ಕ್ಲಿಂಗ್ ಜಾನ್ಸನ್ ಅವರ ಪ್ರಯತ್ನವನ್ನು ಶ್ಲಾಘಿಸಿದರು. ಜಿಸಿಪಿಎಎಸ್ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ, ಕ್ಲಿಂಗ್ ಅವರು ಸೂಕ್ಷ್ಮ ವಿಷಯವನ್ನು ಸಂವೇದನಾಶೀಲವಾಗಿ ಚಲನಚಿತ್ರ ಮಾಡಿದ್ದಾರೆ. ಸ್ಥಳೀಯ ಭಾಷೆ, ಸ್ಥಳೀಯತೆ ಮತ್ತು ಪಾತ್ರಗಳು ಚಿತ್ರವನ್ನು ಮನಮುಟ್ಟುವಂತೆ ಮಾಡಿದೆ ಎಂದರು. ಲಿಂಗ ಸಂಬಂಧಿ ಬಿಕ್ಕಟ್ಟಿನಿಂದ ಬಳಲುತ್ತಿರುವವರ ಸೂಕ್ಷ್ಮತೆಗಳನ್ನು ಚಿತ್ರ ಹೊರತಂದಿದೆ ಎಂದು ಮನಶ್ಶಾಸ್ತ್ರಜ್ಞೆ ಡಾ.ಜಯಶ್ರೀ ಭಟ್ ಹೇಳಿದರು. ದ್ವಮ್ದ್ವ ಚಿತ್ರದ ಕಲಾವಿದರಾದ ಸಿತೇಶ್ ಸಿ ಗೋವಿಂದ್ (ಸಹ ನಿರ್ದೇಶಕ), ರಾಜೇಂದ್ರ ನಾಯಕ್, ಬೆನ್ಸು ಪೀಟರ್, ಅಭಿಲಾಷ್ ಶೆಟ್ಟಿ, ಪ್ರಭಾಕರ ಕುಂದರ್, ಭಾಸ್ಕರ್ ಮಣಿಪಾಲ್, ಆಡನ್ ಕ್ಲಿಯೋನ್, ಗಣೇಶ್, ರಾಧಿಕಾ ಭಟ್, ಭಾರತಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಬಳಿಕ ಕಲಾವಿದರನ್ನು ಸನ್ಮಾನಿಸಲಾಯಿತು.