ಉಡುಪಿ, ಏ.1: ಕಾಪು ತಾಲೂಕಿನ ಮಜೂರು ಗ್ರಾಮದ ಜಲಂಚಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಾಲಯದ ಶಾಸನವನ್ನು ಕರಂದಾಡಿ ಶ್ರೀಧರ್ ಶೆಟ್ಟಿಗಾರ್ ಅವರ ಮಾಹಿತಿಯ ಮೇರೆಗೆ ಎಂ.ಎಸ್.ಆರ್.ಎಸ್ ಕಾಲೇಜು-ಶಿರ್ವ ಇಲ್ಲಿನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಉಪನ್ಯಾಸಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಮರು ಅಧ್ಯಯನಕ್ಕೆ ಒಳಪಡಿಸಿದ್ದಾರೆ.
ಈ ಮೊದಲು ದೇವಾಲಯದ ಇತಿಹಾಸದ ಕುರಿತು ಸಮಗ್ರ ಅಧ್ಯಯನವನ್ನು ತುಳುನಾಡಿನ ಖ್ಯಾತ ಇತಿಹಾಸತಜ್ಞ ಪಾದೂರು ಗುರುರಾಜ ಭಟ್ಟರು ನಡೆಸಿದ್ದು, ದೇವಾಲಯದ ಶಾಸನದ ಕುರಿತು ಸೌತ್ ಇಂಡಿಯಾ ಇನ್ಸ್ಕ್ರಿಪ್ಶನ್ಸ್ ವ್ಯಾಲುಮ್-27, ಶಾಸನ ಸಂಖ್ಯೆ-212ರಲ್ಲಿ ಅಲ್ಪ ಪ್ರಮಾಣದಲ್ಲಿ ಪ್ರಕಟವಾಗಿದೆ.
ಕಣ (ಗ್ರಾನೈಟ್) ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಈ ಶಾಸನವು 20 ಸಾಲುಗಳನ್ನು ಹೊಂದಿದ್ದು, ಹೆಚ್ಚಿನ ಲಿಪಿಗಳು ನಾಶವಾಗಿದ್ದರಿಂದ ಗೋಚರಿಸುವ ಲಿಪಿಯ ಆಧಾರದ ಮೇಲೆ ಅಧ್ಯಯನವನ್ನು ಮಾಡಲಾಗಿದೆ.
ಸ್ವಸ್ತಿ ಶ್ರೀ ಎಂಬ ಶುಭ ಸೂಚಕದಿಂದ ಪ್ರಾರಂಭವಾಗುವ ಈ ಶಾಸನವು ಆಳುಪ ದೊರೆ ವೀರಪಾಂಡ್ಯ ದೇವ ನನ್ನು (ಸಾ.ಶ.ವ 1390-99) ಶ್ರೀಮತ್ಪಾಣ್ಡ್ಯ ಚಕ್ರವರ್ತಿ ಅರಿರಾಯ ಗಜಾಂಕುಸ ಎಂದು ಉಲ್ಲೇಖಿಸಿದ್ದು, ಧಾತೃ ಸಂವತ್ಸರದ (ಸಾ.ಶ.ವ 1396) ವೈಶಾಖ ಮಾಸದಲ್ಲಿ ದೇವಾಲಯಕ್ಕೆ ವಾರಂಬಳಿಯ ವ್ಯಕ್ತಿಯು (ಹೆಸರು ಅಳಿಸಿ ಹೋಗಿದೆ) ಬಿಟ್ಟ ದತ್ತಿ ವಿವರವನ್ನು ಶಾಸನವು ತಿಳಿಸುತ್ತದೆ. ಶಾಸನದಲ್ಲಿ ಮುಡಿ 10 ಬೀಜ ಬಿತ್ತುವ ಭೂಮಿಯ ವಿವರ, ಚತುಸ್ಸೀಮೆಯ ವಿವರಗಳು ಕಂಡು ಬಂದಿದ್ದು, ಈ ದಾನಕ್ಕೆ ಬ್ರಾಹ್ಮಣರ ಸ್ವಹಸ್ತದ ಒಪ್ಪ ಎಂಬ ಒಕ್ಕಣೆಯಿದೆ. ಈ ಶಾಸನವನ್ನು ಹಾಳು ಮಾಡಿದವರು ಗಂಗ ವಾರಣಾಸಿಯಲ್ಲಿ ಗೋವುಗಳನ್ನು ವಧಿಸಿದ ದೋಷಕ್ಕೆ ಹೋಗುವರು ಎಂಬ ಶಾಪಾಶಯ ವಾಕ್ಯವನ್ನು ಶಾಸನದ ಕೊನೆಯಲ್ಲಿ ಕಾಣಬಹುದು.
ಎರಡನೆಯ ವೀರಪಾಂಡ್ಯನ ಈ ಶಾಸನವು ಜಲಂಚಾರು ಪ್ರದೇಶದಲ್ಲಿ ದೊರೆತ ಪ್ರಾಚೀನ ಶಾಸನವಾಗಿದ್ದು, ಅಧ್ಯಯನ ದೃಷ್ಟಿಯಿಂದ ಪ್ರಮುಖವಾಗಿದೆ ಎಂದು ಸಂಶೋಧನಾರ್ಥಿಯು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಲ್ಲಿಯ ಇನ್ನೊಂದು ಶಾಸನವು, 6 ಸಾಲುಗಳನ್ನು ಹೊಂದಿದ್ದು, 1937 ಮತ್ತು 42 ರಲ್ಲಿ ಕ್ರಮವಾಗಿ ಈಶ್ವರ ಮತ್ತು ಗಣಪತಿ ದೇವರನ್ನು ಎಂ.ಕೃಷ್ಣ ತಂತ್ರಿ ಪುನ ಮಾಡಿದ ಎಂದು ತಿಳಿಸುತ್ತದೆ. ಈ ಶಾಸನವನ್ನು ಸೂಕ್ಷ್ಮವಾಗಿ ಗಮನಿಸಿದಾಗ, 13ನೆಯ ಶತಮಾನದ ಕೆಲವು ಲಿಪಿಗಳು ಕಂಡುಬರುವುದರಿಂದ ಹಳೆಯ ಶಾಸನದ ಕಲ್ಲನ್ನು ಪ್ರಸ್ತುತ ಈ ಶಾಸನವನ್ನು ಬರೆಯಲು ಮರು ಬಳಕೆ ಮಾಡಿಕೊಂಡಿರುವುದು ಕಂಡುಬರುತ್ತದೆ. ಕ್ಷೇತ್ರಕಾರ್ಯ ಸಂಶೋಧನೆಯಲ್ಲಿ ದೇವಾಲಯದ ಮೊಕ್ತೇಸರರು ರವಿರಾಜ ಶೆಟ್ಟಿ ಹಾಗೂ ಅರ್ಚಕರಾದ ಗುರುರಾಜ್ ಭಟ್ ಸಹಕಾರ ನೀಡಿರುತ್ತಾರೆ.