ನವದೆಹಲಿ, ಮಾ.25: ಹೋಳಿ ಆಚರಣೆಯ ವೇಳೆ ನೀರು ಹೈಟೆನ್ಷನ್ ತಂತಿಗೆ ತಾಗಿ ವಿದ್ಯುತ್ ಆಘಾತದಿಂದ ಆರು ಮಂದಿ ಗಾಯಗೊಂಡ ಘಟನೆ ಪೂರ್ವ ದೆಹಲಿಯ ಮಂಡವಾಲಿ ಪ್ರದೇಶದ ಗಣೇಶ ನಗರದಲ್ಲಿ ಸೋಮವಾರ ನಡೆದಿದೆ. ಪೊಲೀಸರ ಪ್ರಕಾರ, ಮಂಡವಾಲಿಯಲ್ಲಿ ಹೈಟೆನ್ಶನ್ ವಿದ್ಯುತ್ ತಂತಿಯಿಂದ ವಿದ್ಯುದಾಘಾತ ಪ್ರಕರಣದ ಬಗ್ಗೆ ಮಾಹಿತಿ ಪಡೆದ ತಕ್ಷಣ ಸ್ಥಳೀಯ ಪೊಲೀಸರು, ಆಂಬುಲೆನ್ಸ್ ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಯಿತು.
ಮೂಲಗಳ ಪ್ರಕಾರ, ದಕ್ಷಿಣ ಗಣೇಶನಗರದಲ್ಲಿರುವ ಐದು ಅಂತಸ್ತಿನ ಮನೆಯ ಮೇಲ್ಛಾವಣಿಯ ಮೇಲೆ ಕೆಲವರು ವಾಟರ್ ಗನ್ ಮತ್ತು ಬಣ್ಣಗಳನ್ನು ಹಿಡಿದು ಹೋಳಿ ಆಡುತ್ತಿದ್ದರು. ಕಟ್ಟಡದ ಛಾವಣಿಯ ಹತ್ತಿರ ಹೈ-ಟೆನ್ಷನ್ ತಂತಿ ಹಾದುಹೋಗುತ್ತದೆ. ಕೆಳಗೆ ಇದ್ದವರ ಮೇಲೆ ಕೆಲವರು ನೀರು ಎರಚುತ್ತಿದ್ದರು. ಈ ವೇಳೆ ನೀರಿನ ಸಂಪರ್ಕಕ್ಕೆ ತಂತಿ ತಗುಲಿ ಮೇಲ್ಛಾವಣಿಯಲ್ಲಿ ಹೋಳಿ ಆಡುತ್ತಿದ್ದವರಿಗೆ ವಿದ್ಯುದಾಘಾತ ಸಂಭವಿಸಿದೆ. ಗಾಯಗೊಂಡವರಲ್ಲಿ ಮಹಿಳೆ ಸೇರಿದಂತೆ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.