ಉಡುಪಿ, ಮಾ.21: ಇಂದಿನ ಸ್ಥರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಲು ವಿದ್ಯಾರ್ಥಿಗಳು ಪ್ರಮುಖವಾಗಿ ಮೈಗೂಡಿಸಿಕೊಳ್ಳಬೇಕಾದ ಎರಡು ಗುಣಗಳೆಂದರೆ ತಮ್ಮ ಗುರಿಯ ಬಗ್ಗೆ ದೃಢ ನಿರ್ಧಾರ, ಕಠಿಣ ಪರಿಶ್ರಮ. ತಮ್ಮ ಕಲಿಕೆಯ ದಾರಿಯಲ್ಲಿ ಅಭಿರುಚಿ ಮತ್ತು ಅಧ್ಯಯನದಲ್ಲಿ ನಿರಂತರತೆ ಪಾಲಿಸಲೇಬೇಕು. ಇಂದಿನ ಸಿ.ಇ.ಟಿ. ಎನ್.ಇ.ಇ.ಟಿ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಗಮವಾಗಿ ಎದುರಿಸಿ ಗೆಲ್ಲಬೇಕಾದರೆ ತಾವು ಕಲಿತು ಪರಿಣತಿಗೊಂಡ ವಿಷಯಗಳ ಮೇಲೆ ಹೆಚ್ಚಿನ ತರಬೇತಿ ಅನಿವಾರ್ಯತೆ ಇದೆ. ಬಹುಮುಖ್ಯವಾಗಿ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಇದರಲ್ಲಿ ಹೆಚ್ಚಿನ ಸಹಾಯದ ಅಗತ್ಯವಿದೆ. ಈ ನಿಟ್ಟಿನಲ್ಲಿ ಉಡುಪಿ, ಬ್ರಹ್ಮಾವರ, ಕಾಪು ಬಂಟರ ಸಂಘ ಹೆಚ್ಚಿನ ಆಸಕ್ತಿ ವಹಿಸಿ ಉಚಿತ ತರಬೇತಿಯನ್ನು ಉಡುಪಿಯ ವಿನಯ ಅಕಾಡೆಮಿಯ ಮೂಲಕ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಉಡುಪಿ ಎಂ.ಜಿಎಂ.ಕಾಲೇಜಿನ ನಿವೃತ್ತ ರಾಜ್ಯಶಾಸ್ತ್ರ ಮುಖ್ಯಸ್ಥ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಅಭಿಪ್ರಾಯಪಟ್ಟರು.
ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇವರ ಆಶ್ರಯದಲ್ಲಿ ಉಡುಪಿ ಕಾಪು ಬ್ರಹ್ಮಾವರ ತಾಲೂಕಿನ ಬಂಟ ಸಮಾಜದ ವಿದ್ಯಾರ್ಥಿಗಳಿಗೆ ಉಡುಪಿ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಉಡುಪಿ ಬಂಟರ ಸಂಘದ ಸಂಚಾಲಕ ಶಿವಪ್ರಸಾದ್ ಹೆಗ್ಡೆ ವಹಿಸಿದ್ದರು. ನಿಕಟಪೂರ್ವಾಧ್ಯಕ್ಷ ಜಯರಾಜ್ ಹೆಗ್ಡೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಬಂಟರ ಸಂಘದ ಹಿರಿಯ ಸದಸ್ಯರಾದ ಪ್ರಸಾದ್ ಹೆಗ್ಡೆ ಮಾರಾಳಿ, ಚೇರ್ಕಾಡಿ ಹರೀಶ್ ಶೆಟ್ಟಿ, ಕಿಶೋರ್ ಶೆಟ್ಟಿ, ಮಿಥುನ್ ಹೆಗ್ಡೆ, ಇಂದಿರಾ ಎಸ್.ಹೆಗ್ಡೆ, ಅನುಪಮ ಪ್ರಸಾದ್ ಶೆಟ್ಟಿ, ತಾರಾನಾಥ್ ಹೆಗ್ಡೆ ಮಣಿಪಾಲ್, ವಿನಯ ಅಕಾಡೆಮಿಯ ಪ್ರಶಾಂತ ಉಪಸ್ಥಿತರಿದ್ದರು. ಬಂಟರ ಸಂಘದ ಸಹ ಸಂಚಾಲಕ ದಿನೇಶ್ ಹೆಗ್ಡೆ ವಂದಿಸಿ, ಹಿರಿಯ ಸದಸ್ಯ ಶ್ರೀಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.