ಪ್ರವಾಸಿಗರ ಮನಸೂರೆಗೊಳ್ಳುವ ತಾಣವೇ ದೂದ್ ಪತ್ರಿ. ಇದು ತನ್ನ ಹೆಸರಿಗೆ ಅನ್ವರ್ಥವಾಗಿ ನಿಂತಿರುವ ಪ್ರವಾಸಿ ತಾಣವೂ ಹೌದು. ಕಾಶ್ಮೀರದ ಬುದಗಾಮ್ ಜಿಲ್ಲೆಯಲ್ಲಿ ಕಾಣಸಿಗುವ ಬಹು ಸುಂದರವಾದ ಹಿಲ್ ಸ್ಟೇಷನ್ ಎಂದೇ ಗುರುತಿಸಿಕೊಂಡ ದೂದ್ ಪತ್ರಿ. ಇದು ‘ವ್ಯಾಲ್ಯೂ ಆಫ್ ಮಿಲ್ಕ್’ ಎಂದೇ ಪ್ರಸಿದ್ಧವಾದ ಪ್ರವಾಸಿ ತಾಣ. ಶ್ರೀನಗರದಿಂದ 45ಕಿ.ಮೀ ದೂರದಲ್ಲಿದೆ. ಹಿಮಾಲಯ ಶ್ರೇಣಿಯಲ್ಲಿ ಬರುವ ಈ ಪ್ರದೇಶದ ಸುತ್ತ ಪರ್ವತ ಶ್ರೇಣಿ. ಮಧ್ಯಭಾಗದಲ್ಲಿ ಬೊಗಣಿ (bowl) ಆಕೃತಿಯನ್ನು ಹೊಂದಿದೆ. ಬೇಸಿಗೆಯಲ್ಲಿ ಬಣ್ಣ ಬಣ್ಣದ ಕಾಡು ಕುಸುಮಗಳಿಂದ ಪ್ರವಾಸಿಗರನ್ನು ಆಕರ್ಷಿಸಿದರೆ, ಚಳಿಗಾಲದಲ್ಲಿ ನವಂಬರ್ ನಿಂದ ಫೆಬ್ರವರಿ ವರೆಗೆ ಹಿಮದಿಂದ ಸಂಪೂರ್ಣವಾಗಿ ವೃಕ್ಷಗಳು ಮುಚ್ಚಿಕೊಂಡು ಸೂರ್ಯನ ರಶ್ಮಿಗೆ ಹಾಲಿನ ಕೆನೆಯಾಗಿ ಮಿಣಿ ಮಿಣಿ ಮಿಂಚುತ್ತಿರುತ್ತವೆ. ಅದೇ ಬೇಸಿಗೆಯಲ್ಲಿ ಅಂದರೆ ಏಪ್ರಿಲ್ ನಿಂದ ಸೆಪ್ಟೆಂಬರ್ ಮಾಸದಲ್ಲಿ ಈ ಪ್ರದೇಶ ಹಸಿರು ಹಾಸಿದ ನೆಲ ಹಾಗೂ ವೃಕ್ಷಗಳು ಹಸಿರು ತೇೂರಣವನ್ನು ಕಟ್ಟಿಕೊಂಡು ನಿಂತಿರುತ್ತವೆ.
ಸಮುದ್ರ ಮಟ್ಟದಿಂದ 8957 ಅಡಿಗಳಷ್ಟು ಎತ್ತರದಲ್ಲಿರುವ ಈ ದೂದ್ ಪತ್ರಿಯ ಪರ್ವತ ಶ್ರೇಣಿಯ ಮಧ್ಯದಲ್ಲಿ ಹಾಲಿನ ನೊರೆಯ ರೂಪದಲ್ಲಿ ನೀರು ಹರಿದು ಬರುವ ವಿಹಂಗಮ ದೃಶ್ಯವೇ ದೂದ್ ಪತ್ರಿ ಹೆಸರಿಗೆ ಇನ್ನೊಂದು ಚಿನ್ನದ ಗರಿ. ಇಲ್ಲಿ ಹರಿಯುವ ಪವಿತ್ರವಾದ ನದಿಯೇ ಶಾಲಿಗಂಗಾ. ಈ ನದಿಯ ನೀರು ಕಲ್ಲು ಬಂಡೆಗಳ ನಡುವೆ ಹಾಲಿನ ಹೊಳೆಯೊ ಅನ್ನುವ ತರದಲ್ಲಿ ಹರಿದು ಬರುವ ನೀರಿನ ಝಳ ಝಳ ಧ್ವನಿ ಕಣ್ಣ ಮನಗಳಿಗೆ ಮುದ ನೀಡುವ ಸೊಬಗು. ಚಳಿಗಾಲದಲ್ಲಿ ಹಿಮದಿಂದ ಆವೃತವಾದ ಒಂದು ಬಗೆಯ ಸೌಂದರ್ಯವಾದರೆ, ಬೇಸಿಗೆಯ ಏಪ್ರಿಲ್ ನಿಂದ ಸೆಪ್ಟೆಂಬರ್ ತನಕ ದೂದ್ ಪತ್ರಿ ಹಸಿರಿನಿಂದ ತಂಪಾಗಿಸಿಕೊಂಡು ಪ್ರವಾಸಿಗರ ತನು ಮನ ತಣಿಸುವ ಪ್ರವಾಸಿ ಧಾಮ. ಇದರ ಮಧ್ಯದಲ್ಲಿ ಸಾಗುವಾಗ ಸಣ್ಣಪುಟ್ಟ ಮನೆಗಳು ಹಿಮಗಡ್ಡೆಯಿಂದ ಮುಚ್ಚಿ ಹೇೂಗಿರುವ ದೃಶ್ಯವೂ ಕಾಣಸಿಗುತ್ತದೆ. ಈ ಕುರಿತಾಗಿ ಸ್ಥಳೀಯರನ್ನು ವಿಚಾರಿಸಿದಾಗ ಅವರು ಹೇಳುವ ಮಾಹಿತಿಯೆಂದರೆ, ಆ ಪ್ರದೇಶದಲ್ಲಿ ಬುಡಕಟ್ಟು ಜನರು ಸಣ್ಣಪುಟ್ಟ ಹಟ್ಸಗಳನ್ನು ಮಾಡಿಕೊಂಡು ವಾಸಿಸುತ್ತಾರೆ. ಚಳಿಗಾಲದಲ್ಲಿ ಅವರ ಮನೆಗಳೆಲ್ಲವೂ ಹಿಮದಿಂದ ಮುಚ್ಚಿ ಹೇೂಗುತ್ತದೆ. ಹಾಗಾಗಿ ತಮ್ಮ ಮುಂದಿನ ಬದುಕನ್ನು ಹುಡುಕಿಕೊಂಡು ಜಮ್ಮು ಕಾಶ್ಮೀರದ ನಗರ ಪ್ರದೇಶಗಳಿಗೆ ವಲಸೆ ಹೇೂಗುತ್ತಾರೆ. ಬೇಸಿಗೆಯಲ್ಲಿ ಮತ್ತೆ ವಾಪಾಸು ಬರುತ್ತಾರೆ ಅನ್ನುವ ಮಾಹಿತಿ ಕೊಟ್ಟರು. ಅಂತೂ ಅಲ್ಲಿನ ಜನ ಪ್ರಕೃತಿಯ ಜೊತೆ ಹೇಗೆ ಹೊಂದಾಣಿಕೆ ಮಾಡಿಕೊಂಡು ಬದುಕನ್ನು ಒಂದು ಸವಾಲಾಗಿ ಸ್ವೀಕರಿಸಬೇಕಾಗಿದೆ ಅನ್ನುವುದನ್ನು ನಾವು ಮರೆಯುವಂತಿಲ್ಲ.
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.