ಉಡುಪಿ, ಮಾ.20: ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಉಡುಪಿ ಇದರ ಮಹಿಳಾ ಘಟಕದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಮುಖ್ಯ ಅಭ್ಯಾಗತರಾಗಿ ಆಗಮಿಸಿದ ರಂಗಭೂಮಿ ಕಲಾವಿದರಾದ ಆರ್ ಜೆ ಕಾಜಲ್ ಅವರು ಮಾತನಾಡಿ, ಜೀವನದಲ್ಲಿ ಕಷ್ಟಗಳು ಬಂದಾಗ ಎದೆಗುಂದದೆ ಧೈರ್ಯವಾಗಿ ಎದುರಿಸಬೇಕು. ಆಗ ಮಾತ್ರ ಎಲ್ಲರೂ ಯಶಸ್ವಿ ಬದುಕನ್ನು ರೂಪಿಸಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಮಾನವಾಗಿ ಬದುಕುವ ಹಕ್ಕಿದೆ. ಜನರು ಜಾತಿ, ಭಾಷೆ, ಧರ್ಮದ ಹೆಸರಿನಲ್ಲಿ ಕಚ್ಚಾಡುವ ಬದಲು ಸೌಹಾರ್ದಯುತವಾಗಿ ಬದುಕಿ ಮಾದರಿಯಾಗಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಕನ್ಯಾ ಮೇರಿ ಜೆ., ಮಹಿಳಾ ಘಟಕದ ಸಂಯೋಜಕರಾದ ಲವಿಟಾ ಡಿಸೋಜ, ವಿದ್ಯಾರ್ಥಿ ಪ್ರತಿನಿಧಿ ಆಶ್ಲಿ ಥೋಮಸ್ ಉಪಸ್ಥಿತರಿದ್ದರು. ವಿಜಯಲಕ್ಷ್ಮೀ ಸ್ವಾಗತಿಸಿ, ಸ್ವಪ್ನ ವಂದಿಸಿದರು. ದೀಪಕ್ ಕಾಮತ್ ಎಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.