ಕೋಟ, ಮಾ.20: ಯಕ್ಷಗಾನದಲ್ಲಿ ಕೋಟ ವೈಕುಂಠರವರ ಕೊಡುಗೆ ಅನನ್ಯವಾದದ್ದು. ಪ್ರತಿ ಪಾತ್ರಕ್ಕೂ ಅವರು ಸೈ ಎನಿಸಿಕೊಂಡವರು ಎಂದು ಕೋಟದ ಗೀತಾನಂದ ಟ್ರಸ್ಟ್ ಮುಖ್ಯಸ್ಥ ಆನಂದ್ ಸಿ ಕುಂದರ್ ಅಭಿಪ್ರಾಯಪಟ್ಟರು. ಕೋಟತಟ್ಟು ಪರಿಸರದ ಹಿರಿಯ ಯಕ್ಷಕಲಾವಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದಿ.ಕೋಟ ವೈಕುಂಠರ ಸ್ವಗೃಹದಲ್ಲಿ ಹಮ್ಮಿಕೊಂಡ ಕೋಟ ಅಮೃತೇಶ್ವರಿ ಯಕ್ಷಗಾನ ಮೇಳದ ಬಯಲಾಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿಯೊಂದು ವೇಷಕ್ಕೂ ಜೀವ ತುಂಬುವ ಕೋಟ ವೈಕುಂಠ ಸ್ಮರಣಾರ್ಥ ಯಕ್ಷಗಾನ ಕಾರ್ಯಕ್ರಮ ಕಲೆಗೆ ನೀಡಿದ ಮಹಾಗೌರವವಾಗಿದೆ. ಅವರ ಹೆಸರಿನಲ್ಲಿ ಸನ್ಮಾನ ಸ್ವೀಕರಿಸಿದ ಕಲಾವಿದರು ಕೋಟ ವೈಕುಂಠರಂತೆ ಯಕ್ಷಲೋಕದಲ್ಲಿ ಪ್ರಸಿದ್ಧಿ ಪಡೆಯಲಿ ಎಂದರು. ದಿ.ಕೋಟ ವೈಕುಂಠರ ಹೆಸರಿನೊಂದಿಗೆ ಕೋಟ ಅಮೃತೇಶ್ವರಿ ಮೇಳದಲ್ಲಿ ಸೇವೆ ಸಲ್ಲಿಸುತ್ತಿರುವ ಕಲಾವಿದರಾದ ಮೊಳಹಳ್ಳಿ ಕೃಷ್ಣ ನಾಯ್ಕ್, ಸೀತಾರಾಮ ಹೆಗಡೆ ಇವರುಗಳನ್ನು ಸನ್ಮಾನಿಸಲಾಯಿತು. ವಿಶ್ವವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಎಚ್ ಸುಜಯೀಂದ್ರ ಹಂದೆ ಅಭಿನಂದನಾ ನುಡಿಗಳನ್ನಾಡಿದರು.
ಕೋಟ ವೈಕುಂಠರ ಪುತ್ರ ಉಮೇಶ್ ರಾಜ್, ಮುಕೇಶ್, ಮನೆಯ ಮಾಲಿಕರಾದ ಆನಂದ್ ಮರಕಾಲ, ನರಸಿಂಹ ಮರಕಾಲ, ಕೋಟತಟ್ಟು ಗ್ರಾ.ಪಂ ಅಧ್ಯಕ್ಷ ಸತೀಶ್ ಕುಂದರ್, ಕೋಟ ಮೊಗವೀರ ಯುವ ಸಂಘಟನೆಯ ಮಾಜಿ ಅಧ್ಯಕ್ಷ ರಮೇಶ್ ವಿ ಕುಂದರ್, ಕೋಟ ಸಿಎ ಬ್ಯಾಂಕ್ ನಿರ್ದೇಶಕ ರಂಜಿತ್ ಕುಮಾರ್, ಅಮೃತೇಶ್ವರಿ ಮೇಳದ ವ್ಯವಸ್ಥಾಪಕ ಕೋಟ ಸುರೇಶ್, ಮೇಳದ ಭಾಗವತ ರಾಘವೇಂದ್ರ ಮಯ್ಯ ಹಾಲಾಡಿ ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕ ಕೆ.ರಾಘವೇಂದ್ರ ತುಂಗ ಸ್ವಾಗತಿಸಿ ನಿರೂಪಿಸಿದರು.