ಕಾಶ್ಮೀರಕ್ಕೆ ಹೇೂದವರು ನೇೂಡಲೇಬೇಕಾದ ಇನ್ನೊಂದು ಸ್ಥಳವೆಂದರೆ ಸೇೂನ್ ಮಾರ್ಗ.ಇದು ಶ್ರೀನಗರದಿಂದ ಸುಮಾರು 80 ಕಿ.ಮೀ.ದೂರದ ಗಂಧರ್ ಬಾಲ್ ಜಿಲ್ಲೆಯಲ್ಲಿದೆ. ಇದರ ವಿಶೇಷತೆ ಏನೆಂದರೆ ಕಡಿದಾದ ಪರ್ವತ ಶ್ರೇಣಿಯಲ್ಲಿ ಹಬ್ಬಿಕೊಂಡಿರುವ ಮರಗಳ ಸಾಲಿನಲ್ಲಿ ಹಿಮದ ಲೇಪನದಿಂದ ಮರಗಳು ಬೆಳ್ಳಿಯ ಝರಿ ಸೀರೆಯನ್ನು ತೊಟ್ಟು ನಿಂತಿರುವ ಸೌಂದರ್ಯದ ರೂಪದರ್ಶಿಯ ಹಾಗೆ ಗೋಚರಿಸುತ್ತವೆ. ಸೇೂನ್ ಮಾರ್ಗದ ಕೊನೆಯಲ್ಲಿ ಸುಮಾರು 6 ಕಿ.ಮಿ ದೂರದಷ್ಟು ಸುರಂಗ ಮಾರ್ಗದಲ್ಲಿ ಕ್ರಮಿಸುವುದೇ ಒಂದು ರೇೂಚಕ ಅನುಭವ. ಈ ಸುರಂಗ ಮಾರ್ಗ ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡಿದ್ದು. ಇದನ್ನು ‘Z.Morh tunnel’ ಎಂದು ಹೆಸರಿಸಲಾಗಿದೆ. ಇಲ್ಲಿಂದ ಮುಂದೆ ಹಿಮ ಬೆಟ್ಟದ ಶ್ರೇಣಿ. ಅಲ್ಲಿ ಪ್ರವಾಸಿಗರ ಮನೇೂರಂಜನ ಆಟಗಳಿಗಾಗಿಯೇ ಸ್ಕೇಟಿಂಗ್, ಜಾರು ಬಂಡಿ ಆಟಗಳಿಗೂ ಅನುಕೂಲ ಮಾಡಿಕೊಡಲಾಗಿದೆ. ಇಲ್ಲಿಂದ ಕೆಲವೇ ದೂರದಲ್ಲಿ ಕಾಣಬಹುದಾದ ಬಹು ಚಿರಪರಿಚಿತ ಪ್ರದೇಶವೆಂದರೆ ಕಾರ್ಗಿಲ್ ಮಿಲಿಟರಿ ನೆಲೆಯ ತಾಣ. ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ಇದೇ ಸೇೂನ್ ಮಾರ್ಗವನ್ನು ನಮ್ಮ ಮಿಲಿಟರಿ ಕಾರ್ಯಚರಣೆಗಾಗಿ ಬಳಸಿಕೊಂಡಿದರಂತೆ. ಈ ತಾಣ ನಮ್ಮ ದೇಶ ರಕ್ಷಣೆ ಹೊತ್ತ ಸೈನಿಕರ ಸ್ಥೈರ್ಯ, ಧೈರ್ಯ ಬಲಿದಾನ ನೆನಪಿಸುತ್ತದೆ. ಸೇೂನ್ ಮಾರ್ಗವನ್ನು ಲಡಾಖ್ ನ ಹೆಬ್ಬಾಗಿಲು ಎಂದೇ ಗುರುತಿಸಲಾಗುತ್ತದೆ.
-ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ