ಕಟಪಾಡಿ, ಮಾ.19: ಪಾಜಕ ಆನಂದತೀರ್ಥ ವಿದ್ಯಾಲಯದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳ ಹೆತ್ತವರ ಪಾದಪೂಜೆ ನೆರವೇರಿಸುವ ಮೂಲಕ ವಿಶಿಷ್ಠವಾಗಿ ನೆರವೇರಿಸಲಾಯಿತು. ಸಮಾಜ ಸೇವಕ, ಉಡುಪಿಯ ಸಂವೇದನ ಫೌಂಡೇಶನ್‌ನ ಸ್ಥಾಪಕ ಪ್ರಕಾಶ್ ಮಲ್ಪೆ ಭಾಗವಹಿಸಿ ಮಾತನಾಡುತ್ತಾ, ಆಧುನಿಕತೆ ಮುಂದುವರೆದಂತೆ ನಮ್ಮ ಮಕ್ಕಳಲ್ಲಿ ತಂದೆ ತಾಯಿ, ಗುರು ಹಿರಿಯರು ಎನ್ನುವ ಗೌರವ ಮನೋಭಾವನೆ ಕಡಿಮೆಯಾಗಿ ಒಂದು ರೀತಿಯ ದರ್ಪದ ಮನೋಭಾವನೆ ಬೆಳೆಯುತ್ತಿದೆ. ಇಂದಿನ ಮಕ್ಕಳು ಪಾಶ್ಚಾತ್ಯ ಸಂಸ್ಕೃತಿಗೆ ಬಹಳ ಬೇಗ ಬೆರಗಾಗಿ ಅದರ ದಾಸರಾಗುತ್ತಿದ್ದಾರೆ. ಮಕ್ಕಳಿಗೆ ವಿದ್ಯೆ ಕಲಿಸುವ ವಿದ್ಯಾ ದೇಗುಲದಲ್ಲಿ ಸಂಸ್ಕಾರಯುತ ವಾತಾವರಣ ನಿರ್ಮಾಣವಾದರೆ, ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಎಲ್ಲರ ಬಗ್ಗೆಯೂ, ಎಲ್ಲದರ ಬಗ್ಗೆಯೂ ಗೌರವದಿಂದ ಕಾಣುವ ಮನೋಭಾವ ಬೆಳೆಸಿಕ್ಕೊಳ್ಳುತ್ತಾರೆ ಎಂದರು.
ಆನಂದತೀರ್ಥ ಸಂಸ್ಥೆಯ ಖಜಾಂಜಿ ಲಕ್ಷ್ಮಿನಾರಾಯಣ ಉಪಾಧ್ಯ ಮಾತನಾಡಿ, ಹತ್ತನೇ ತರಗತಿ ಎನ್ನುವುದು ಮಕ್ಕಳ ಬೆಳವಣಿಗೆಯ ಮೊದಲ ಘಟ್ಟ, ಈ ಹಂತದಲ್ಲಿ ಮಕ್ಕಳು ಕಲಿತ ಸಂಸ್ಕಾರಯುತ ಶಿಕ್ಷಣ ತಮ್ಮ ಜೀವನದ ಕೊನೆತನಕ ಇರುತ್ತದೆ. ತಂದೆ ತಾಯಿಗಳು ಮೊದಲ ಗುರು, ಮೊದಲ ದೇವರು ಇವರನ್ನು ಪ್ರೀತಿಯಿಂದ ಕಾಣುವ, ಗೌರವಿಸುವ ಮನೋಭಾವನೆ ಎಲ್ಲಾ ಮಕ್ಕಳಲ್ಲಿಯೂ ಬೆಳೆಯಬೇಕು. ಅಂತಹ ಬೆಳವಣಿಗೆ ಶಾಲಾ ದಿನದಿಂದ ಆರಂಭವಾಗಬೇಕು ಎಂದರು. ಸಂಸ್ಕೃತ ಶಿಕ್ಷಕ ನಾಗರಾಜ್ ಮಯ್ಯ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಪೋ಼ಷಕರಿಗೆ ಮಕ್ಕಳು ಪಾದಪೂಜೆ ನೆರವೇರಿಸಿದರು.
ಪ್ರಾಂಶುಪಾಲರಾದ ಡಾ. ಗೀತಾ ಎಸ್. ಕೋಟ್ಯಾನ್, ಶಿಕ್ಷಕಿ ಸುನಾಲಿನಿ ಉಪಸ್ಥಿತರಿದ್ದರು. ಶಿಕ್ಷಕ ವೃಂದದವರು ಸಮಾರಂಭದಲ್ಲಿ ಭಾಗವಹಿಸಿ ಮಕ್ಕಳ ಮುಂದಿನ ಶೈಕ್ಷಣಿಕ ಜೀವನ ಸುಖವಾಗಿರಲಿ ಎಂದು ಶುಭ ಹಾರೈಸಿದರು. ತಾಂತ್ರಿಕ ವಿಭಾಗದ ಛಾಯಾ ಕೋಟ್ಯಾನ್, ನಿಶ್ಮಿತಾ ಕೋಟ್ಯಾನ್, ಪೂರ್ಣಿಮಾ ಕೋಟ್ಯಾನ್, ವರ್ಷಿತಾ ಆಚಾರ್ಯ ಸಹಕರಿಸಿದರು. ಕನ್ನಡ ಶಿಕ್ಷಕ ಶ್ರೀಪಾದ ಆಚಾರ್ಯ ಸ್ವಾಗತಿಸಿ, ಹಿಂದಿ ಶಿಕ್ಷಕಿ ವಿದ್ಯಾ ವಂದಿಸಿದರು. ಇಂಗ್ಲಿಷ್ ಶಿಕ್ಷಕಿ ಜ್ಯೋತಿ ಜಿ ಕಾರ್ಯಕ್ರಮ ನಿರೂಪಿಸಿದರು.