ಮಂಗಳೂರು, ಮಾ.19: ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಡೆಯಿತು. ಮಂಗಳೂರು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಅಧ್ಯಕ್ಷರಾಗಿ ನಿವೃತ್ತರಾಗಿ ಪ್ರಸ್ತುತ ಯನೆಪೋಯ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕ ಹಾಗೂ ವಿಜ್ಞಾನಿಗಳಾಗಿ ಸೇವೆ ಸಲ್ಲಿಸುತ್ತಿರುವ ಪ್ರೊ. ಚಂದ್ರಶೇಖರ ಕೆ.ಆರ್ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ಸ್ಥಳೀಯ ತಂತ್ರಜ್ಞಾನದ ಮಹತ್ವ ಹಾಗೂ ದೇಶದ ಅಭಿವೃದ್ಧಿಯಲ್ಲಿ ಅದರ ಪಾತ್ರದ ಕುರಿತು ವಿವರಿಸಿದರು. ಕಾರ್ಯಕ್ರಮದ ಅಂಗವಾಗಿ ವಿಕಸಿತ ಭಾರತಕ್ಕಾಗಿ ದೇಶೀಯ ಮತ್ತು ಸ್ಥಳೀಯ ತಂತ್ರಜ್ಞಾನಗಳು ಎನ್ನುವ ವಿಷಯದ ಕುರಿತು ಮಂಗಳೂರು ವಿ.ವಿ ಮಟ್ಟದ ಅಂತರ ಕಾಲೇಜು ವಿಜ್ಞಾನ ಉಪನ್ಯಾಸ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಮಂಗಳೂರಿನ ಕೆನರಾ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಸಂಧ್ಯಾ ಹಾಗೂ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವೈಜ್ಞಾನಿಕ ಅಧಿಕಾರಿಗಳಾದ ಡಾ. ರಾಮಕೃಷ್ಣ ಇವರು ತೀರ್ಪುಗಾರರಾಗಿ ಆಗಮಿಸಿದ್ದರು. ಶ್ರೀರಕ್ಷ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿ-ಪ್ರಥಮ, ವಂದನ ಆರ್. ಹೆಗಡೆ., ಪೂರ್ಣಪ್ರಜ್ಞ ಕಾಲೇಜು ಉಡುಪಿ-ದ್ವಿತೀಯ ಹಾಗೂ ಮಧುಶ್ರೀ ಕೆ.ಎಸ್., ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ-ತೃತೀಯ ಬಹುಮಾನ ಪಡೆದರು. ವಿಜೇತ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ವಿತರಿಸಲಾಯಿತು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯಕರ ಭಂಡಾರಿ ಎಂ. ಇವರು ವಹಿಸಿದ್ದರು. ವಿಜ್ಞಾನ ಸಂಘದ ಸಂಯೋಜಕರಾದ ಡಾ. ರಮಾಕಾಂತ ಪುರಾಣಿಕ್ ಸ್ವಾಗತಿಸಿ, ಪೂಜ ವಂದಿಸಿದರು. ನಫೀಸ ರಿಫ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಸ್ನಾತಕ ವಿಭಾಗದ ಸಂಯೋಜಕರಾದ ಪ್ರೊ. ವಸಂತಿ ಪಿ ಉಪಸ್ಥಿತರಿದ್ದರು.