ಬಾರಕೂರು, ಮಾ.13: ಮಹಿಳಾ ದಿನಾಚರಣೆಯ ಅಂಗವಾಗಿ ಬಾರ್ಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಲ್ಲಿ ಮಹಿಳಾ ಸಬಲೀಕರಣದ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಸರಕಾರಿ ಮಹಿಳಾ ಕಾಲೇಜು ಅಜ್ಜರಕಾಡು ಇಲ್ಲಿಯ ಪ್ರಾಧ್ಯಾಪಕರಾಗಿರುವ ಪ್ರೊ. ನಿಕೇತನ ಇವರು, ಸಮಾಜದಲ್ಲಿ ಮಹಿಳೆಯರು ಸವಾಲುಗಳನ್ನು ಎದುರಿಸಿ ನಿಲ್ಲುವ ಛಾತಿಯನ್ನು ಬೆಳೆಸಿಕೊಳ್ಳಬೇಕೆಂದರು. ಇಂದಿಗೂ ಕೂಡ ಎಲ್ಲಾ ದೇಶಗಳಲ್ಲೂ ಮಹಿಳೆಯರು ದ್ವಿತೀಯ ದರ್ಜೆಯ ಪ್ರಜೆಯಾಗಿಯೇ ಪರಿಗಣಿತಗೊಳ್ಳುತ್ತಿರುವ ಕುರಿತು ವಿಷಾದ ವ್ಯಕ್ತಪಡಿಸುತ್ತ ಮಹಿಳೆಯರು ಆರ್ಥಿಕವಾಗಿ ಸಶಕ್ತಗೊಳ್ಳಬೇಕಾದ, ಸಬಲೀಕರಣಗೊಳ್ಳಬೇಕಾದ ಅಗತ್ಯತೆಯನ್ನು ಒತ್ತಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶೋಭಾ ಇವರು, ಮುಂದಿನ ಪೀಳಿಗೆಯ ವಿದ್ಯಾರ್ಥಿಗಳು ಪರಸ್ಪರ ಗೌರವ, ಸಮಾನಭಾವ ಹಾಗೂ ಸಹಕಾರದಿಂದ ಬದುಕು ನಡೆಸುವುದನ್ನು ಕಲಿಯಬೇಕೆಂದು ಕಿವಿಮಾತು ಹೇಳಿದರು.
ಕಾಲೇಜಿನ ಐಕ್ಯೂಏಸಿ ಸಂಚಾಲಕರಾದ ವಿದ್ಯಾ ಪಿ ಉಪಸ್ಥಿತರಿದ್ದರು. ತೃತೀಯ ಬಿಎ ವಿದ್ಯಾರ್ಥಿ ಸುಜನ್ ಪ್ರಾರ್ಥಿಸಿದರು. ಗಣಕಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಗಂಗಾಧರಯ್ಯ ಸ್ವಾಗತಿಸಿ, ತೃತೀಯ ಬಿ ಎಸ್ ಡಬ್ಲ್ಯೂ ವಿದ್ಯಾರ್ಥಿನಿ ವಿಸ್ಮಿತ ವಂದಿಸಿದರು. ತೃತೀಯ ಬಿಸಿಎ ವಿದ್ಯಾರ್ಥಿ ಅಕ್ಷಯ್ ಕಾರ್ಯಕ್ರಮ ನಿರೂಪಿಸಿದರು.