ಮಲ್ಪೆ, ಮಾ.10: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ- ಸಂಜೀವಿನಿ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಭಾನುವಾರದವರೆಗೆ ಮಲ್ಪೆ ಬೀಚ್ ನಲ್ಲಿ ಸಂಜೀವಿನಿ ಸ್ವ ಸಹಾಯ ಸಂಘದ ಮಹಿಳೆಯರು ತಯಾರಿಸಿದ ಉತ್ಪನ್ನ ಗಳ ಮಾರಾಟ ಮೇಳ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೊಂಡಿರುತ್ತದೆ. ಜಿಲ್ಲೆಯಲ್ಲಿ ಸಂಜೀವಿನಿ ಯೋಜನೆಯಡಿಯಲ್ಲಿ ತರಲಾಗಿರುವ ಗ್ರಾಮೀಣ ಪ್ರದೇಶದ ಮಹಿಳೆಯರು ಸಾಮಾಜಿಕವಾಗಿ ಸಬಲೀಕರಣಗೊಳ್ಳುತ್ತಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಅನೇಕ ನವೀನ ಕಾರ್ಯಕ್ರಮಗಳನ್ನು ಜಿಲ್ಲೆಯ ಸಂಜೀವಿನಿ ಯೋಜನೆಯಡಿ ಅನುಷ್ಟಾನ ಮಾಡಲಾಗಿದೆ. ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳೆಯರು ಉಳಿತಾಯ, ಸಾಲ ಮಾತ್ರವಲ್ಲದೆ ಸಮುದಾಯ ಬಂಡವಾಳ ನಿಧಿ, ಬ್ಯಾಂಕ್ ಸಾಲ, ಸರಕಾರಿ ಇಲಾಖೆಯ ಮುಖಾಂತರ ಸಾಲ ಸೌಲಭ್ಯ ಪಡೆದು ಆದಾಯ ಉತ್ಪನ್ನ ಚಟುವಟಿಗಳನ್ನು ನಡೆಸುತ್ತಿದ್ದಾರೆ. ಇವರು ತಯಾರಿಸಿದ ಉತ್ಪನ್ನಗಳಿಗೆ ಗ್ರಾಮ ಮಟ್ಟದಲ್ಲಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಮಾಸಿಕ ಸಂತೆ, ವಿಶೇಷ ಕಾರ್ಯಕ್ರಮಗಳಲ್ಲಿ ಮಾರಾಟ ಮಳಿಗೆಯ ಮೂಲಕ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆಯನ್ನು ಜಿಲ್ಲಾ ಪಂಚಾಯತ್ ಮೂಲಕ ಮಾಡಿಕೊಡಲಾಗುತ್ತಿದೆ. ಜೊತೆಯಲ್ಲಿ ಬೇರೆ ಬೇರೆ ರಾಜ್ಯದಲ್ಲಿ ಆಯೋಜಿಸಿದ ಸರಸ್ ಮೇಳದಲ್ಲೂ ಈ ಸಂಜೀವಿನಿ ಮಹಿಳೆಯರು ಭಾಗವಹಿಸಿ ತಾವು ತಯಾರಿಸಿದ ಉತ್ಪನ್ನಗಳನ್ನು ಹೊರ ಜಿಲ್ಲೆಗಳಿಗೂ ಪರಿಚಯಿಸಿದ್ದಾರೆ.
ಹಪ್ಪಳ ಸಂಡಿಗೆ ಉಪ್ಪಿನಕಾಯಿಂದ ಹಿಡಿದು ದೊಡ್ಡ ದೊಡ್ಡ ಉತ್ಪನ್ನಗಳ ಫ್ಯಾಕ್ಟರಿ ನಡೆಸುವ ಮೂಲಕ ಸಂಜೀವಿನಿ ಮಹಿಳೆಯರು ಆರ್ಥಿಕ ಸಬಲೀಕರಣದತ್ತ ದೊಡ್ಡ ಹೆಜ್ಜೆಯನಿಡುತ್ತಿದ್ದಾರೆ.
ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳನ್ನು ದೊಡ್ಡ ಮಟ್ಟದಲ್ಲಿ ಪ್ರಚಾರ ಹಾಗೂ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾದ ಮಲ್ಪೆ ಬೀಚ್ ನಲ್ಲಿ ಜಿಲ್ಲಾಮಟ್ಟದ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗಿದೆ. ಇದರಲ್ಲಿ ಜಿಲ್ಲೆಯ ಸುಮಾರು 40 ಮಹಿಳಾ ಉದ್ಯಮಿದಾರರು ತಾವೇ ತಯಾರಿಸಿದ ಗೃಹ ಉಪಯೋಗಿ ವಸ್ತುಗಳು, ಕರಕುಶಲ ವಸ್ತುಗಳು, ಟೆರಕೋಟ ವಸ್ತುಗಳು, ಕೃತಕ ಆಭರಣ, ಆಯುರ್ವೇದಿಕ್ ಉತ್ಪನ್ನಗಳು, ಬೇಕರಿ ಉತ್ಪನ್ನಗಳು, ಸಾವಯವ ತರಕಾರಿ, ಪಾಸ್ಟ್ ಫುಡ್ ಇತ್ಯಾದಿ ಉತ್ಪನ್ನಗಳನ್ನು ಪ್ರವಾಸಿಗರಿಗೆ ಪರಿಚಯಿಸುವುದರ ಮೂಲಕ ಹೆಚ್ಚಿನ ಉತ್ಪನ್ನ ಗಳು ಮಾರಾಟವಾಗಿ ಅಧಿಕ ಲಾಭ ಗಳಿಸಿದರು.
ಜಿಲ್ಲೆಯ ಗ್ರಾಮೀಣ ಭಾಗದ ಮಹಿಳೆಯರು ಆದಾಯ ಉತ್ಪನ್ನ ಚಟುವಟಿಕೆ ಮಾತ್ರವಲ್ಲದೇ ವಿವಿಧ ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸುವ ದೃಷ್ಟಿಯಿಂದ ಪ್ರತಿ ದಿನ ಸಂಜೆ 6 ಗಂಟೆಯಿಂದ 9 ಗಂಟೆಯವರೆಗೆ ನಡೆದ ವಸ್ತು ಪ್ರದರ್ಶನದಲ್ಲಿ ವಿವಿಧ ಗ್ರಾಮೀಣ ಪ್ರದೇಶದ ಸಂಜೀವಿನಿ ಮಹಿಳೆಯರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಅನಾವರಣಗೊಂಡಿತು. ಮನೋರಂಜನೆಯಿಂದ ಬಲವರ್ಧನೆ ಎಂಬ ಧ್ಯೇಯದೊಂದಿಗೆ ವಿವಿಧ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳೆಯರು ಯಕ್ಷಗಾನ, ಭತ್ತ ಕುಟ್ಟುವ ಹಾಡು, ಸಂಗೀತ ರಸಮಂಜರಿ, ಸಿನಿಮಾ ನೃತ್ಯ, ಪಾಡ್ದನ, ಕಂಗೀಲು ಕುಣಿತ, ಭರತನಾಟ್ಯ, ಹುಲಿ ಕುಣಿತ, ಸುಗ್ಗಿ ಕುಣಿತ, ಕುಣಿತ ಭಜನೆ ಮೂಲಕ ತಮ್ಮ ಪ್ರತಿಭೆಯನ್ನು ತೋರ್ಪಡಿಸಿ ಉಡುಪಿಯ ಕಲೆ, ಸಂಸ್ಕೃತಿಯನ್ನು ಪ್ರವಾಸಿಗರಿಗೆ ಪರಿಚಯಿಸಿದರು.
ರಜೆ ದಿನಗಳಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ದೇಶ-ವಿದೇಶದ ಪ್ರವಾಸಿಗರು ಮಲ್ಪೆ ಬೀಚ್ ಗೆ ಆಗಮಿಸಿದ್ದು ಇಲ್ಲಿನ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಭೇಟಿ ನೀಡಿ ಗ್ರಾಮೀಣ ಮಹಿಳೆಯರು ತಯಾರಿಸಿದ ಗೃಹ ಉಪಯೋಗಿ ವಸ್ತುಗಳನ್ನು ಖರೀದಿಸಿ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಉಡುಪಿಯ ಕಲೆ ಹಾಗೂ ಸಂಸ್ಕೃತಿಯ ಪ್ರತೀಕವಾದ ಮಹಿಳೆಯರ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಗ್ರಾಮೀಣ ಮಹಿಳಾ ಪ್ರತಿಭೆಗೆ ನಿಬ್ಬೆರಗಾದರು.