ಬ್ರಹ್ಮಾವರ, ಮಾ.10: ಸಮೃದ್ಧಿ ಮಹಿಳಾ ಮಂಡಳಿ (ರಿ) ಪೇತ್ರಿ, ಸಮೃದ್ಧಿ ಸಂಜೀವಿನಿ ಸ್ವ ಸಹಾಯ ಸಂಘ ಪೇತ್ರಿ, ಸಂಜೀವಿನಿ ಸೂಪರ್ ಮಾರ್ಕೆಟ್ ಉಡುಪಿ ಮತ್ತು ನವಾರ್ಡ್ ನ
ಸಂಯುಕ್ತ ಆಶ್ರಯದಲ್ಲಿ ಸಮೃದ್ಧಿ ಮಹಿಳಾ ಮಂಡಳಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯಿತು. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರತಿಮಾ ಸುರೇಶ್ ಉದ್ಘಾಟಿಸಿದರು. ನಬಾರ್ಡಿನ ಡಿಡಿಎಮ್ ಸಂಗೀತ .ಎಸ್ ಕರ್ತಾ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಉಡುಪಿಯಲ್ಲಿ ಸಂಜೀವಿನಿ ಸೂಪರ್ ಮಾರ್ಕೆಟ್ ನ್ನು ಅತ್ಯಂತ ಒಳ್ಳೆಯ ರೀತಿಯಿಂದ ನಿಭಾಯಿಸುತ್ತಿರುವ ಸಮೃದ್ಧಿ ಸಂಜೀವಿನಿಯಂತೆ ಎಲ್ಲಾ ಜಿಲ್ಲೆಗಳಲ್ಲೂ ಸೂಪರ್ ಮಾರ್ಕೆಟ್ ಗಳು ತಲೆಯೆತ್ತಿದರೆ ಮಹಿಳೆಯರ ಉತ್ಪನ್ನಗಳಿಗೆ ಮಾರುಕಟ್ಟೆ ದೊರೆತು, ಮಹಿಳಾ ಸಬಲೀಕರಣವಾಗುವುದು ಎಂದರು.
ಬಿ.ಐ.ಆರ್.ಡಿ- ನಬಾರ್ಡ್ ನ ಡೆಪ್ಯುಟಿ ಜನರಲ್ ಮೆನೇಜರ್ ಶೀಲಾ ಭಂಡಾರ್ಕರ್ ಮುಖ್ಯ ಅತಿಥಿಯಾಗಿದ್ದರು. ಕೆನರಾ ಬ್ಯಾಂಕ್ ಪೇತ್ರಿ ಶಾಖೆಯ ಮ್ಯಾನೇಜರ್ ಪ್ರದೀಪ್, ಬ್ರಹ್ಮಾವರ ಕ್ಲಸ್ಟರ್ ಸೂಪರ್ ವೈಸರ್ ಸ್ವಾತಿ ಉಪಸ್ಥಿತರಿದ್ದರು. ಸಮೃದ್ಧಿ ಮಹಿಳಾ ಮಂಡಳಿಯ ಅಧ್ಯಕ್ಷೆ ಲತಾ ಡಿ ಶೆಟ್ಟಿ ಸಮೃದ್ಧಿ ಸಂಜೀವಿನಿ ಸ್ವಸಹಾಯ ಸಂಘದ ಅಧ್ಯಕ್ಷೆ ಯಶೋಧ, ಉಡುಪಿಯ ಸಂಜೀವಿನಿ ಸೂಪರ್ ಮಾರ್ಕೆಟ್ ನ ಅಧ್ಯಕ್ಷೆ ಪ್ರಸನ್ನಾ ಪ್ರಸಾದ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು .
ರಿಕ್ಷಾ ಚಾಲನೆಯನ್ನು ಮಾಡುತ್ತಾ ಸ್ವಾವಲಂಬಿಯಾಗಿ ಬದುಕಿ ಇತರರಿಗೆ ಮಾದರಿಯಾಗಿರುವ ಮಂಗಳಮುಖಿ ಕಾವೇರಿ ಮೇರಿ ಡಿಸೋಜಾ ರವರನ್ನು ಮಹಿಳಾ ದಿನಾಚರಣೆಯ ಅಂಗವಾಗಿ ಗೌರವಿಸಿ ಸನ್ಮಾನಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಬಳಿಕ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಆಗಮಿಸಿದವರಿಗೆ ಸಂಜೀವಿನಿ ಸೂಪರ್ ಮಾರ್ಕೆಟ್ ನ ಉತ್ಪನ್ನಗಳನ್ನು ಸ್ಮರಣಿಕೆಯಾಗಿ ನೀಡಲಾಯಿತು. ಗೌರವಾಧ್ಯಕ್ಷೆ ಲಲಿತಾ ಪಿ ನಾಯ್ಕ, ಕೋಶಾಧಿಕಾರಿ ಅರ್ಚನಾ ಭಟ್, ಪ್ರಗತಿ ಒಕ್ಕೂಟದ ಪ್ರತಿಮಾ, ದಿವ್ಯ, ಪೂರ್ಣಿಮಾ, ಸವಿತಾ, ನಾಗರತ್ನ, ಮಲ್ಲಿಕಾ, ಉಡುಪಿ ಕೈ ಮಗ್ಗ ನೇಕಾರರು ಉಪಸ್ಥಿತರಿದ್ದರು. ಶಾರದಾ ಎಮ್ ಶೆಟ್ಟಿ ಸ್ವಾಗತಿಸಿ, ವೀಣಾ ಪಿ. ಶ್ಯಾನುಭೋಗ್ ವಂದಿಸಿದರು. ವನಿತಾ ಪಿ ಶೆಟ್ಟಿ ನಿರೂಪಿಸಿದರು.