ಉಡುಪಿ, ಮಾ.1: ಜಿಲ್ಲೆಯಲ್ಲಿ ಮಾರ್ಚ್ 3 ರಿಂದ 6 ರವರೆಗೆ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದ್ದು, 0-5 ವರ್ಷದೊಳಗಿನ ಗ್ರಾಮೀಣ ಪ್ರದೇಶದ 53661 ಹಾಗೂ ನಗರ ಪ್ರದೇಶದ 13191 ಸೇರಿದಂತೆ ಒಟ್ಟು 66852 ಅರ್ಹ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಲು 660 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಭಾರತವು 12 ವರ್ಷಕ್ಕೂ ಮೇಲ್ಪಟ್ಟು ಪೋಲಿಯೋ ಮುಕ್ತ ರಾಷ್ಟ್ರವಾಗಿದೆ. ಇದು ಮಹತ್ತರವಾದ ಸಾಧನೆಯಾಗಿದ್ದರೂ ಭಾರತದ ನೆರೆ ರಾಷ್ಟ್ರಗಳಲ್ಲಿ ವೈಲ್ಡ್ ಪೋಲಿಯೋ ವೈರಸ್ ಇರುವುದು ಆತಂಕಕಾರಿಯಾಗಿದೆ. ಪೋಲಿಯೋ ನಿರ್ಮೂಲನೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಭಾರತ ತಜ್ಞ ಸಲಹಾ ಗುಂಪಿನ ಶಿಫಾರಸ್ಸಿನ ಅನ್ವಯ 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ರಾಷ್ಟ್ರೀಯ ಲಸಿಕಾ ದಿನ (ಪಲ್ಸ್ ಪೋಲಿಯೋ) ದಿನವನ್ನು 2024 ರ ಮಾರ್ಚ್ 3 ರಂದು ನಡೆಸಲು ಸರ್ಕಾರ ಆದೇಶಿಸಿರುತ್ತದೆ.
ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 568, ನಗರ ಪ್ರದೇಶದ 92, 6 ಮೊಬೈಲ್ ಟೀಮ್, 31 ಟ್ರಾನ್ಸಿಟ್ ಬೂತ್‌ಗಳಲ್ಲಿ ಮತ್ತು ಎಲ್ಲಾ ಟೋಲ್‌ಗೇಟ್‌ಗಳಲ್ಲಿಯೂ ಲಸಿಕಾ ಕೇಂದ್ರಗಳನ್ನು ತೆರೆದು 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತವಾಗಿ ಪಲ್ಸ್ ಪೋಲಿಯೋ ಲಸಿಕೆ ನೀಡಲಾಗುತ್ತದೆ. ಕಾರ್ಯಕ್ರಮವನ್ನು ಆರೋಗ್ಯ, ಪಂಚಾಯತ್ ರಾಜ್, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ನಗರಸಭೆ, ಕಂದಾಯ ಇಲಾಖೆ ಮತ್ತು ಇತರ ಇಲಾಖೆ, ರೋಟರಿ ಹಾಗೂ ಇತರ ಸ್ವಯಂಸೇವಾ ಸಂಸ್ಥೆಗಳ ಸಹಕಾರ ಹಾಗೂ ಜಿಲ್ಲಾಡಳಿತದ ಮಾರ್ಗದರ್ಶನದೊಂದಿಗೆ ನಡೆಸಲಾಗುತಿದ್ದು, 2788 ಲಸಿಕಾ ಸ್ವಯಂಸೇವಕರು, 144 ಮೇಲ್ವಿಚಾರಕರು, ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು, ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿ ಲಸಿಕೆಯ ಯಶಸ್ವಿಗೆ ಸಹಕರಿಸಲಿದ್ದಾರೆ.
ಸಾರ್ವಜನಿಕರು, ವಲಸೆ ಕಾರ್ಮಿಕರು, ಕೊಳಚೆ ನಿವಾಸಿಗಳು ತಮ್ಮ 0-5 ವರ್ಷದೊಳಗಿನ ಮಕ್ಕಳಿಗೆ ಮಾರ್ಚ್ 3 ರಂದು ಲಸಿಕಾ ಕೇಂದ್ರಗಳಿಗೆ ತೆರಳಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಬೇಕು. ಗ್ರಾಮಾಂತರ ಪ್ರದೇಶದಲ್ಲಿ ಮಾ. 4 ಮತ್ತು 5 ರಂದು ಹಾಗೂ ನಗರ ಪ್ರದೇಶದಲ್ಲಿ ಮಾ. 4 ರಿಂದ 6 ರವರೆಗೆ ಸ್ವಯಂಸೇವಕರು ಮನೆ ಭೇಟಿ ಮಾಡಿ 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪಲ್ಸ್ ಪೋಲಿಯೋ ಹನಿ ಹಾಕಿಸಿದ ಬಗ್ಗೆ ಮಾಹಿತಿ ಕಲೆಹಾಕಲಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.