ಉಡುಪಿ, ಮಾ.1: ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ಮತ್ತು ಕರುಣಾಳು ಬಾ ಬೆಳಕೆ ಪ್ರತಿಷ್ಠಾನದ ವತಿಯಿಂದ ನಗರಸಭಾ ಸದಸ್ಯರಾದ ಕೆ. ವಿಜಯ ಕೊಡವೂರು ಸಂಯೋಜನೆಯಲ್ಲಿ ಲಕ್ಷ್ಮೀ ನಗರ ಗರ್ಡೆಯಲ್ಲಿನ ಕೃಷ್ಣಪ್ಪ ಕಾಂಪ್ಲೆಕ್ಸ್ ನಲ್ಲಿ ಮಾರ್ಚ್ 2 ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಅಂಚೆ ಜನಸಂಪರ್ಕ ಅಭಿಯಾನ ನಡೆಯಲಿದೆ. ಈ ಅಭಿಯಾನದಲ್ಲಿ ಹೊಸ ಆಧಾರ್ ನೊಂದಣಿ, ಬಯೋಮೆಟ್ರಿಕ್ ಪರಿಷ್ಕರಣೆ, ವಿಳಾಸ ಹಾಗು ಮೊಬೈಲ್ ಸಂಖ್ಯೆ ತಿದ್ದುಪಡಿ ಮಾಡಿಕೊಡಲಾಗುವುದಲ್ಲದೆ, ವಿವಿಧ ಅಂಚೆ ಸೇವೆಗಳ ಮಾಹಿತಿ ಕಾರ್ಯಗಾರ ಇರುತ್ತದೆ.
ಮೀನುಗಾರರಿಗೆ ಕಡಲ ಮಕ್ಕಳಿಗಾಗಿ ಕೇವಲ ರೂ. 699 ವಾರ್ಷಿಕ ಪ್ರಿಮಿಯಂನಲ್ಲಿ ಹತ್ತು ಲಕ್ಷ ರೂಪಾಯಿವರೆಗಿನ ಬಜಾಜ್ ಅಪಘಾತ ವಿಮೆ ಮತ್ತು ಇತರರಿಗೆ ಅದೇ ಮೊತ್ತದ ರೂ. 520 ರ ಟಾಟಾ ಅಪಘಾತ ವಿಮೆ, ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಫಲಾನುಭವಿಗಳಿಗೆ ಐಪಿಪಿಬಿ ಮೊದಲಾದ ಆನ್-ಲೈನ್ ಖಾತೆಗಳನ್ನು ಸ್ಥಳದಲ್ಲಿಯೇ ತೆರೆಯುವ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಈ ಅಭಿಯಾನದ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕಾಗಿ ಉಡುಪಿ ಅಂಚೆ ವಿಭಾಗದ ಅಧೀಕ್ಷಕರು ಮನವಿ ಮಾಡಿದ್ದಾರೆ.
ಗ್ರಾಹಕರು ತರಬೇಕಾದ ದಾಖಲೆಗಳು: ಆಧಾರ್ ಪ್ರತಿ, ಪಾನ್ ಕಾರ್ಡ್ ಪ್ರತಿ, ಗುರುತು ಪತ್ರ, ಪಾಸ್ ಪೊರ್ಟ್ ಗಾತ್ರದ ಫೋಟೊ-2, ಸುಕನ್ಯಾ ಸಮೃದ್ಧಿ ಖಾತೆಗೆ ಹೆಣ್ಣು ಮಗುವಿನ ಜನನ ಪ್ರಮಾಣ ಪತ್ರ ಮತ್ತು ಆಧಾರ್ ಪ್ರತಿ. ಹೆಚ್ಚಿನ ವಿವರಗಳಿಗೆ ಸ್ಥಳೀಯ ಅಂಚೆ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.