ಉಡುಪಿ, ಫೆ.26: ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್ ಕುಂದಾಪುರ, ಗ್ರಾಮ ಪಂಚಾಯತ್ ಹಕ್ಲಾಡಿ ವತಿಯಿಂದ ರುಡ್ ಸೆಟ್ ತರಬೇತಿ ಸಂಸ್ಥೆಯ ಮೂಲಕ ಮಹಾತ್ಮ ಗಾಂಧಿ ಉನ್ನತಿ ಕೌಶಲ್ಯ ಯೋಜನೆಯಡಿ ಹದಿಮೂರು ದಿನದ ಸಮಗ್ರ ಕೃಷಿ ತರಬೇತಿ ಕಾರ್ಯಕ್ರಮವನ್ನು ಹಕ್ಲಾಡಿ ಸಮುದಾಯದ ಭವನದಲ್ಲಿ ಹಮ್ಮಿಕೊಳ್ಳಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರೇಮ ದೇವಾಡಿಗ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುತ್ತಿದ್ದಾರೆ. ಸ್ವಸಹಾಯ ಸಂಘದ ಪರಿಕಲ್ಪನೆಯು ಮಹಿಳೆಯರ ಅಭಿವೃದ್ಧಿಗೆ ಪೂರಕವಾಗಿದೆ. ಸಮಗ್ರ ಕೃಷಿಯ ತರಬೇತಿಯ ಸಂಪೂರ್ಣ ಪ್ರಯೋಜನವನ್ನು ನಮ್ಮ ಗ್ರಾಮ ಪಂಚಾಯಿತಿನ ಮಹಿಳೆಯರು ಪಡೆದು ಆ ಮೂಲಕ ಕೃಷಿಯಲ್ಲಿ ಅಭಿವೃದ್ಧಿ ಹೊಂದಬೇಕೆಂದು ತಿಳಿಸಿದರು.
ಜಿಲ್ಲಾ ವ್ಯವಸ್ಥಾಪಕ ಅವಿನಾಶ್ ಮಾತನಾಡಿ, ಇಂದು ಗ್ರಾಮೀಣ ಜೀವನೋಪಾಯ ಅಭಿಯಾನದ ಮೂಲಕ ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರಿಗೆ ಅನೇಕ ರೀತಿಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ತರಬೇತಿ ಪಡೆದ ಮಹಿಳೆಯರು ಇಂದು ಸ್ವ ಉದ್ಯೋಗ ಕೈಗೊಂಡು ಉದ್ಯಮ ಕ್ಷೇತ್ರದಲ್ಲಿ ಸಬಲೀಕರಣಗೊಳ್ಳುತ್ತಿದ್ದಾರೆ. ಇಂದು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನೂರು ಮಾನವ ದಿನ ಪೂರ್ಣಗೊಳಿಸಿದ ಮಹಿಳೆಯರಿಗೆ 13 ದಿನದ ಸಮಗ್ರ ಕೃಷಿ ಬಗ್ಗೆ ತರಬೇತಿ ಹಮ್ಮಿಕೊಂಡಿದ್ದು, ಈಗಾಗಲೇ ಕೃಷಿಯಲ್ಲಿ ಯಶಸ್ವಿಯಾದ ಹಾಗೂ ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು. ಮಹಿಳೆಯರು ತರಬೇತಿ ವಿಷಯಗಳನ್ನು ತಮ್ಮ ಕೃಷಿ ಜೀವನದಲ್ಲಿ ಅಳವಡಿಸಿಕೊಂಡು ಕೃಷಿಯಲ್ಲಿ ಅಭಿವೃದ್ಧಿ ಹೊಂದುವುದರ ಮೂಲಕ ಇತರ ಮಹಿಳೆಯರಿಗೆ ಮಾದರಿಯಾಗಬೇಕೆಂದು ತಿಳಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ ಮಾತನಾಡಿ, ಹಕ್ಲಾಡಿ ಗ್ರಾಮ ಪಂಚಾಯತ್ ನರೇಗಾ ಯೋಜನೆಯಡಿ ಅನೇಕ ಸಾಧನೆಗಳನ್ನು ಮಾಡಿದ್ದು ಹಾಗೂ ನರೇಗಾ ಯೋಜನೆಯಡಿ ನೂರು ಮಾನವ ದಿನ ಪೂರ್ಣಗೊಳಿಸಿದ ಹಚ್ಚಿನ ಫಲಾನುಭವಿಗಳನ್ನು ನಮ್ಮ ಗ್ರಾಮ ಪಂಚಾಯಿತ್ ಹೊಂದಿದೆ. ಅದರ ಫಲವಾಗಿ ಇಂದು ಸಮಗ್ರ ಕೃಷಿ ವಿಷಯದ ಬಗ್ಗೆ ತರಬೇತಿಯನ್ನು ಈ ಗ್ರಾಮ ಪಂಚಾಯತ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ತರಬೇತಿಯ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು. ರುಡ್ ಸೆಟ್ ಸಂಸ್ಥೆಯ ಉಪನ್ಯಾಸಕರಾದ ಸಂತೋಷ್, ತಾಲೂಕು ಮಟ್ಟದ ಚಿತ್ತಾರ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ವಿಜಯ ಗಾಣಿಗ, ಕಾರ್ಯದರ್ಶಿ ಪ್ರೇಮ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ವೀಣಾ ರಾಣಿ, ತಾಲೂಕು ವ್ಯವಸ್ಥಾಪಕ ಪ್ರಶಾಂತ್, ವಲಯ ಮೇಲ್ವಿಚಾರಕ ಹರ್ಷಿತ, ಮುಖ್ಯ ಪುಸ್ತಕ ಬರಹಗಾರರಾದ ನಾಗರತ್ನ,ಕೃಷಿ ಸಖಿ, ಪಶು ಸಖಿ ಹಾಗೂ ಕೃಷಿ ಉದ್ಯೋಗ ಸಖಿಯರು ಉಪಸ್ಥಿತರಿದ್ದರು.