ಮಂಗಳೂರು, ಫೆ.26: ಅಡ್ಯಾರ್ ನ ಸಹ್ಯಾದ್ರಿ ಕಾಲೇಜಿನ ಕ್ರೀಡಾಂಗಣದಲ್ಲಿ ವರ್ಣರಂಜಿತವಾಗಿ ಸಂಪನ್ನಗೊಂಡ ಕೊಡಿಯಾಲ್ ಸ್ಫೋರ್ಟ್ಸ್ ಅಸೋಸಿಯೇಶನ್ ಆಯೋಜಿಸಿದ ಎಂಟನೇ ವರ್ಷದ ಜಿಪಿಎಲ್ ಕ್ರಿಕೆಟ್ ಕೂಟದ 2024 ರ ಟ್ರೋಫಿಯನ್ನು ವಳಲಂಕೆ ಫೈಟರ್ಸ್ ಮೂಲ್ಕಿ ಗೆದ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬಳ್ಳಂಬೆಟ್ಟು ತಂಡದ ಖಾತೆ ತೆರೆಯುವ ಮುನ್ನವೇ ಮೊದಲ ವಿಕೆಟ್ ಪತನಗೊಂಡಿತು. ವಳಲಂಕೆ ಫೈಟರ್ಸ್ ತಂಡದ ಪಂಚಮ್ ಭಟ್ ಅವರ ನಿಖರ ದಾಳಿಗೆ ತತ್ತರಿಸಿದ ಆರ್ ಸಿಬಿ ತಂಡ ನಿಗದಿತ ಏಳು ಒವರ್ ಗಳಲ್ಲಿ 38 ರನ್ ಗಳಿಸಿ ಏಳು ವಿಕೆಟ್ ಕಳೆದುಕೊಂಡು ಸುಲಭದ ಟಾರ್ಗೆಟ್ ಅನ್ನು ಎದುರಾಳಿಗೆ ನೀಡಿತು. ಸಾಮಾನ್ಯ ಮೊತ್ತವನ್ನು ಬೆನ್ನತ್ತಿದ್ದ ವಳಲಂಕೆ ಫೈಟರ್ಸ್ ಐದು ಒವರ್ ಮುಗಿಯಲು ಎರಡು ಎಸೆತಗಳು ಇರುವಾಗಲೇ ಗೆಲುವಿನ ಗುರಿಯನ್ನು ಪಾರು ಮಾಡಿತು. ವಿಜೇತ ತಂಡದ ಪಂಚಮ್ ಭಟ್ ಪಂದ್ಯಶ್ರೇಷ್ಟ ಹಾಗೂ ಸರಣಿಯ ಅತ್ಯುತ್ತಮ ಬೌಲರ್ ಪ್ರಶಸ್ತಿಯನ್ನು ಗೆದ್ದುಕೊಂಡರೆ ಜಿಆರ್ ಎಸ್ ಮೈಸೂರ್ ವಾರಿಯರ್ಸ್ ತಂಡದ ದಿಪೇಶ್ ಶೆಣೈ ಅತ್ಯುತ್ತಮ ದಾಂಡಿಗ ಪ್ರಶಸ್ತಿಯಿಂದ ಗೌರವಿಸ್ಪಟ್ಟರು. ಅದೇ ತಂಡದ ರಕ್ಷಿತ್ ಶೆಣೈ ಸರಣಿಯ ಉದಯೋನ್ಮುಖ ಆಟಗಾರ ಪುರಸ್ಕಾರವನ್ನು ಸ್ವೀಕರಿಸಿದರು. ವಿಜೇತ ತಂಡದ ವಿಘ್ನೇಶ್ ಭಟ್ ಅವರಿಗೆ ಪೈ ಸೇಲ್ಸ್ ಪ್ರಾಯೋಜಿತ ಅವನೈರ್ ಸುಜುಕಿ ಮೋಟಾರ್ ಬೈಕ್ ನೀಡಿ ಗಣಪತಿ ಪೈ, ಅರುಣ್ ಪೈ ಅಭಿನಂದಿಸಿದರು. ಜಿಆರ್ ಎಸ್ ಮೈಸೂರು ವಾರಿಯರ್ಸ್ ದ್ವೀತಿಯ ರನ್ನರ್ ಅಪ್ ಪ್ರಶಸ್ತಿ ಗೆದ್ದುಕೊಂಡಿತು.
ಫೈನಲ್ ಪಂದ್ಯದ ಮೊದಲು ವಿಶೇಷ ಚೇತನ ಹುಡುಗರ ಕ್ರಿಕೆಟ್ ಪಂದ್ಯ ನಡೆದಿದ್ದು ಕುಡ್ಲ ಟೈಗರ್ಸ್ ರನ್ನರ್ ಅಪ್ ಹಾಗೂ ಮಂಗಳೂರು ಸೂಪರ್ ಕಿಂಗ್ಸ್ ವಿಜೇತರಾಗಿ ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟರು. ಜಿಪಿಎಲ್ ಉತ್ಸವದಲ್ಲಿ ಈ ಬಾರಿ ಬ್ಯಾಡ್ಮಿಂಟನ್ ಆಟವನ್ನು ಕೂಡ ಸೇರಿಸಲಾಗಿದ್ದು, ಅಖಿಲ ಭಾರತೀಯ ಜಿಎಸ್ ಬಿ ಬ್ಯಾಡ್ಮಿಂಟನ್ ಲೀಗ್ ಸೀಸನ್ 1 ಇದರ ವಿಜೇತ ತಂಡವಾಗಿ ಮಾಲಸಿ ತಂಡ ಮೂಡಿಬಂದಿದೆ. ಬ್ಯಾಡ್ಮಿಂಟನ್ ಬುಲ್ ರನ್ನರ್ ಅಪ್ ಹಾಗೂ ರೈಸಿಂಗ್ ಸ್ಟಾರ್ ಮಂಗಳೂರು ಮೂರನೇ ಸ್ಥಾನವನ್ನು ಸಂಪಾದಿಸಿಕೊಂಡವು.
ಸಮಾರೋಪ ಸಮಾರಂಭದಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಕೊಡಿಯಾಲ್ ಸ್ಫೋರ್ಟ್ ಅಸೋಸಿಯೇಶನ್ ಅಧ್ಯಕ್ಷ ಶಿವಾನಂದ ಶೆಣೈ, ಉದ್ಯಮಿಗಳಾದ ವಾಸುದೇವ್ ಕಾಮತ್, ಅನಂತ್ ಕಾಮತ್, ಗಣಪತಿ ಪೈ, ಅರುಣ್ ಪೈ, ರಾಘವೇಂದ್ರ ಕುಡ್ವಾ, ಪ್ರಮುಖರಾದ ಹನುಮಂತ ಕಾಮತ್, ಸಿಎ ಜಗನ್ನಾಥ ಕಾಮತ್, ಸಂದೇಶ್ ಕಾಮತ್, ನರಸಿಂಹ ಕಾಮತ್, ಆಯೋಜಕರಾದ ಮಂಗಲ್ಪಾಡಿ ನರೇಶ್ ಶೆಣೈ, ಚೇತನ್ ಕಾಮತ್, ನರೇಶ್ ಪ್ರಭು ಹಾಗೂ ಗಣ್ಯರು ಉಪಸ್ಥಿತರಿದ್ದರು. ಕಿರಣ್ ಶೆಣೈ ನಿರೂಪಿಸಿದರು.