ಮಣಿಪಾಲ, ಫೆ.18: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ಯ ವಾರ್ಷಿಕ ಪ್ರಮುಖ ಕಾರ್ಯಕ್ರಮವಾದ ಮಣಿಪಾಲ ಉದ್ಯಮಶೀಲತಾ ಶೃಂಗಸಭೆಯ 7 ನೇ ಆವೃತ್ತಿಯನ್ನು ಮಾಹೆಯ ಸಹ ಕುಲಾಧಿಪತಿಗಳಾದ ಡಾ. ಎಚ್ ಎಸ್ ಬಲ್ಲಾಳ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಾಹೆಯು ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯ ಮನೋಭಾವವನ್ನು ಬೆಳೆಸುವುದರೊಂದಿಗೆ ಉದ್ಯೋಗದಾತರಾಗಲು ಪೂರಕ ವಾತಾವರಣವನ್ನು ಒದಗಿಸುತ್ತಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಮಾಹೆಯ ಆರೋಗ್ಯ ವಿಜ್ಞಾನ ವಿಭಾಗದ ಸಹಕುಲಪತಿಗಳಾದ ಡಾ. ಶರತ್ ರಾವ್, ಉದ್ಯಮಶೀಲತೆಯು ಒಂಟಿ ಪಯಣವಾಗಿರದೆ, ಬೆಂಬಲ, ಸಹಯೋಗ ಹಾಗೂ ಪಾಲುದಾರಿಕೆಯ ಮೂಲಕ ಯಶಸ್ಸು ಸಾಧಿಸಬಹುದು ಎಂದು ತಿಳಿಸಿದರು. ದಿಕ್ಸೂಚಿ ಭಾಷಣ ಮಾಡಿದ ಬೋಟ್ ಸಂಸ್ಥೆಯ ಸಹ-ಸಂಸ್ಥಾಪಕ ಅಮನ್ ಗುಪ್ತಾ, ಉದ್ಯಮದಲ್ಲಿ ಯಶಸ್ಸನ್ನು ಸಾಧಿಸಲು ಅನುಸರಿಸಬೇಕಾದ ಕ್ರಮಗಳನ್ನು ವಿವರಿಸಿದರು.
ಈ ಶೃಂಗಸಭೆಯನ್ನು ಮಣಿಪಾಲ್ ಇನ್‌ಕ್ಯುಬೇಟರ್‌ಗಳು, ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ), ಮಾಹೆಯ ವಿವಿಧ ಆವಿಷ್ಕಾರ ಮತ್ತು ಉದ್ಯಮಶೀಲತೆಯ ಪೋಷಕ ಘಟಕಗಳು ಜಂಟಿಯಾಗಿ ಆಯೋಜಿಸಿದ್ದು, ಎಂಐಟಿ ವಾಣಿಜ್ಯೋದ್ಯಮ ಸೆಲ್ (ಇ-ಸೆಲ್) ಕಾರ್ಯಗತಗೊಳಿಸಿದೆ. ಸಮಾರಂಭದ ಅಂಗವಾಗಿ ಅತ್ಯುತ್ತಮ ಸಾಧನೆಗಾಗಿ ಬ್ಲ್ಯಾಕ್ ಫ್ರಾಗ್ ಟೆಕ್ನಾಲಜೀಸ್, ಈಕೋನ ಎಕ್ಸ್, ಬಗ್ ಬೇಸ್ ಸ್ಟಾರ್ಟಪ್ ಗಳನ್ನು ಸಮ್ಮಾನಿಸಲಾಯಿತು. ಎಂಐಟಿ ಮಣಿಪಾಲದ ನಿರ್ದೇಶಕರಾದ ಕಮಾಂಡರ್ (ಡಾ.) ಅನಿಲ್ ರಾಣಾ, ಜಂಟಿ ನಿರ್ದೇಶಕರಾದ ಡಾ. ಸೋಮಶೇಖರ ಭಟ್, ಶೃಂಗಸಭೆಯ ಸಂಚಾಲಕ ಹಾಗೂ ಎಂಯುಟಿಬಿಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸಂತೋಷ ರಾವ್, ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.