ಉಡುಪಿ, ಫೆ.16: ಪುರಾಣ ಪುರುಷರಾದ ಸವಿತಾ ಮಹರ್ಷಿಗಳು ಸವಿತಾ ಸಮಾಜದ ಅಭಿವೃದ್ಧಿಗೆ ನೀಡಿದ ಕೊಡುಗೆ ಅಪಾರ. ಮಹನೀಯರ ಜಯಂತಿಗಳ ಆಚರಣೆಯ ಸಂದರ್ಭದಲ್ಲಿ ಅವರಗಳ ಜೀವನ ಶೈಲಿ, ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಜಯಂತಿಗಳ ಆಚರಣೆ ಅರ್ಥಪೂರ್ಣವಾಗುತ್ತವೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು. ಅವರು ಶುಕ್ರವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಸವಿತಾ ಸಮಾಜ (ರಿ) ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಸವಿತಾ ಮಹರ್ಷಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಸಮಸಾಮವೇದ ರಚಿಸಿದ ಮಹಾಪುರುಷ ಸವಿತಾ ಮಹರ್ಷಿಗಳು ಶಿವನ ಬಲಗಣ್ಣಿನಿಂದ ಹುಟ್ಟಿದವರು ಎಂಬ ಪ್ರತೀತಿ ಇದೆ. ಸವಿತಾ ಸಮಾಜ ಸಾಂಸ್ಕೃತಿಕವಾಗಿ ಶ್ರೀಮಂತವಾದ ಸಮುದಾಯವಾಗಿದ್ದು, ಹಿಂದುಳಿದ ಸಮುದಾಯಗಳು ಆತ್ಮವಿಶ್ವಾಸದಿಂದ ಜೀವನ ನಡೆಸುವುದರೊಂದಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಮುಂದೆ ಬರಬೇಕು. ಜಯಂತಿಗಳ ಆಚರಣೆಯ ಮೂಲಕ ಸಮುದಾಯಗಳು ಒಗ್ಗೂಡಿದಾಗ ಸಮಾಜದ ಬೆಳವಣಿಗೆಯ ಕುರಿತು ಚಿಂತನೆ ನಡೆಸಲು ಸಾಧ್ಯವಾಗುತ್ತದೆ ಎಂದರು. ಹಿಂದುಳಿದ ಸಮುದಾಯಗಳಿಗೆ ಶಿಕ್ಷಣ ಹಾಗೂ ಜ್ಞಾನದ ಅವಶ್ಯಕತೆ ಇದ್ದು, ಸಮುದಾಯದ ಮುಖಂಡರುಗಳು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವುದರೊಂದಿಗೆ ಮೂಲ ವೃತ್ತಿಯೊಂದಿಗೆ ಶೈಕ್ಷಣಿಕವಾಗಿಯೂ ಸಹ ಮುಖ್ಯ ವಾಹಿನಿಗೆ ಬರುವುದರೊಂದಿಗೆ ಸಮಾನ ಅವಕಾಶಗಳು ಸಿಗುವಂತಾಗಬೇಕು ಎಂದರು.
ಸವಿತಾ ಸಮಾಜದ ಜಿಲ್ಲಾ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲ್ ಉಪನ್ಯಾಸ ನೀಡಿ, ಕ್ಷೌರಿಕ ಸಮಾಜದ ಮೂಲ ಪುರುಷರಾದ ಸವಿತಾ ಮಹರ್ಷಿಗಳು ಶಿವನ ದಿವ್ಯದೃಷ್ಠಿಯಿಂದ ಜನ್ಮ ತಾಳಿದರೆಂಬ ಪ್ರತೀತಿ ಇದ್ದು, ಚತುರ್ವೇದಗಳಲ್ಲಿ ಒಂದಾದ ಸಾಮವೇದವನ್ನು ಇವರು ರಚಿಸಿದ್ದಾರೆ. ಸವಿತಾ ಸಮುದಾಯದವರು ಅನಾದಿಕಾಲದಿಂದಲೂ ಧಾರ್ಮಿಕ ಹಾಗೂ ಸಾಂಪ್ರದಾಯಿಕವಾಗಿ 12 ಪ್ರಮುಖ ವೃತ್ತಿಗಳನ್ನು ಮುಂದುವರೆಸಿಕೊಂಡು ಬಂದಿದ್ದು, ರಾಜ್ಯದಲ್ಲಿ ಇಂದು ಕ್ಷೌರಿಕ ಜನಾಂಗವನ್ನು ಸವಿತಾ ಸಮಾಜ, ಹಡಪದ, ಭಂಡಾರಿ ಸೇರಿದಂತೆ ಸುಮಾರು 27 ಹೆಸರಿನಿಂದ ಪ್ರಾದೇಶಿಕವಾಗಿ ಗುರುತಿಸಲಾಗುತ್ತಿದೆ ಎಂದರು. ರಾಜ್ಯದಲ್ಲಿ ಸಮುದಾಯದವರು ಸಾಮರಸ್ಯದಿಂದ ಜೀವನ ನಡೆಸುತ್ತಿದ್ದಾರೆ. ಸಮಾಜದ ರಕ್ಷಣೆಯ ಹೊಣೆ ಹೊತ್ತ ಸಮುದಾಯದ ವತಿಯಿಂದ ಸಮಾಜದ ಆರ್ಥಿಕತೆಗಾಗಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಸರಕಾರವು ಸವಿತಾ ಸಮಾಜದ ಅಭಿವೃದ್ಧಿ ನಿಗಮಕ್ಕೆ ಹೆಚ್ಚು ಒತ್ತು ನೀಡುವುದರೊಂದಿಗೆ, ಅನುದಾನಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತಾಗಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಶ್ ಅಡಿಗ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ನಿಂಜೂರು ವಿಶ್ವನಾಥ ಭಂಡಾರಿ, ಸಮುದಾಯದ ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ವೀಕ್ಷಿತ್ ನಿರೂಪಿಸಿ, ರಾಜು ಭಂಡಾರಿ ವಂದಿಸಿದರು.