ಈ ಬಾರಿ ಕರಾವಳಿ ಭಾಗದ ಜನರು ಮುಖ್ಯಮಂತ್ರಿ ಸಿದ್ಧರಾಮಯ್ಯ ನವರ ಬಜೆಟ್ ನಲ್ಲಿ ತುಂಬ ಭರವಸೆಗಳನ್ನು ಇಟ್ಟುಕೊಂಡಿದ್ದರು. ಆದರೆ ಅವುಗಳೆಲ್ಲವೂ ಸಂಪೂರ್ಣವಾಗಿ ಹುಸಿಯಾಗಿವೆ. ಉಡುಪಿ ಜಿಲ್ಲೆಯ ಬಹುಮುಖ್ಯ ಬೇಡಿಕೆಗಳಾದ ಉದ್ಯೋಗ ಸೃಷ್ಟಿ ಮಾಡುವ ಐ.ಟಿ.ಪಾರ್ಕ್ ವಿಚಾರವೇ ಇಲ್ಲ. ಟೆಂಪಲ್ ಪ್ರವಾಸೋದ್ಯಮ ಅಭಿವೃದ್ಧಿ ಕುರಿತಾಗಿ ಚಕಾರವೇ ಇಲ್ಲ. ಬಹುಕಾಲದ ಬಹು ಜನರ ನಿರೀಕ್ಷೆಯಾಗಿದ್ದ ಸರಕಾರಿ ಮೆಡಿಕಲ್ ಕಾಲೇಜು ಪ್ರಾಸ್ತಪವೇ ಇಲ್ಲ. ಮೀನುಗಾರರ ಮೂಲ ಬದುಕಿನ ಬೇಡಿಕೆಗಳಿಗೆ ಬಜೆಟ್ ನಲ್ಲಿ ಶೂನ್ಯ ಪ್ರತಿಕ್ರಿಯೆ. ಬಂಟರು ತಮಗೊಂದು ನಿಗಮ ಘೇೂಷಿಸಬಹುದೆಂದು ಕನಸು ಕಾಣುತ್ತಿದ್ದರು, ಆದರೆ ಸಿದ್ದರಾಮಯ್ಯ ಕಳೆದ ಬಾರಿ ಬಂಟರ ಸಮಾವೇಶದಲ್ಲಿ ಕೊಟ್ಟ ಆಶ್ವಾಸನೆ ಎಷ್ಟು ಚೆನ್ನಾಗಿ ಕೆಳಗಿಟ್ಟರು ಅಂದರೆ ತಮ್ಮ ತಲೆಗೆ ತೊಡಿಸಲು ತಂದ ಪೇಟದಷ್ಟೆ ಸಲೀಸಾಗಿ ಬಂಟರ ಬೇಡಿಕೆಯನ್ನು ತಳ್ಳಿ ಬಿಟ್ಟರು.
ಸಿದ್ದರಾಮಯ್ಯನವರು ಮಂಡಿಸಿದ ಸುದೀರ್ಘವಾದ ಬಜೆಟ್ ಕೇವಲ ಪುಟಗಳಿಂದಲೇ ತುಂಬಿಸಿದರು ಬಿಟ್ಟರೆ ಅಭಿವೃದ್ಧಿ ಪರವಾದ ಬೃಹತ್ ಗಾತ್ರದ ಯೇೂಜನೆಗಳ ಕಡೆಗೆ ಗಮನಹರಿಸಲೇ ಇಲ್ಲ. ಕೇವಲ ಚಿಕ್ಕ ಪುಟ್ಟ ಕಾರ್ಯಕ್ರಮಗಳ ವರದಿ ಸಲ್ಲಿಸಿದ ತರದಲ್ಲಿ ಬಜೆಟ್ ತುಂಬಿಕೊಂಡಿದೆ. ಪಂಚ ಗ್ಯಾರಂಟಿಗಳಿಗೆ 52 ಸಾವಿರ ಕೇೂಟಿ ಹಣ ಸಮತೂಗಿಸಿಕೊಳ್ಳುವುದರಲ್ಲಿ ಸುಸ್ತಾದ ಸಿದ್ದರಾಮಯ್ಯನವರು ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಬೇಕಾದ ಅನಿವಾರ್ಯತೆಯ ಸುಳಿಯಲ್ಲಿ ಸಿಕ್ಕಿಕೊಂಡಿದಂತು ಸತ್ಯ. ಜನಸಾಮಾನ್ಯರಿಗೆ ಹೊರೆಯಾಗುವ ತರದಲ್ಲಿ ತೆರಿಗೆ ಹೆಚ್ಚಿಸಿರುತ್ತಾರೆ. ಅಬಕಾರಿ ಶುಲ್ಕ ಶೇ.20 ರಷ್ಟು ಹೆಚ್ಚಳ, ವಾಹನ ತೆರಿಗೆ ಶೇ 7 ರಷ್ಟು ಏರಿಕೆ, ನೊಂದಾಣಿ ಶುಲ್ಕ ಶೇ.14 ರಷ್ಟು ಏರಿಕೆ. ಅಂದರೆ ಇವೆಲ್ಲವೂ ಗ್ಯಾರಂಟಿ ಯೇೂಜನೆಗಳ ಸುಸ್ತಿನ ಬಡ್ಡಿ ಜನಸಾಮಾನ್ಯರ ಮೇಲೆ ಹೊರೆಯಾಗಿ ಬಿದ್ದಿದೆ. ಬಜೆಟ್ ಉದ್ದಕ್ಕೂ ಬಳಸಿದ ಹೆಚ್ಚಿನ ಪದಗಳು ಅಂದರೆ ಅಲ್ಪಸಂಖ್ಯಾತ ಪದಗಳು ಅನ್ನುವುದು ಬಹುಸಂಖ್ಯಾತರ ಗಮನ ಸೆಳೆದಿರುವುದಂತೂ ಸತ್ಯ.
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ, ರಾಜಕೀಯ ವಿಶ್ಲೇಷಕರು.