ಮಣಿಪಾಲ, ಫೆ.15: ಕೃತಕ ಬುದ್ಧಿಮತ್ತೆಯನ್ನು ವಿಶೇಷವಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಎಚ್ಚರಿಕೆಯಿಂದ ಬಳಸಿದರೆ ಹಲವು ಸಾಧ್ಯತೆಗಳನ್ನು ಸಾಧಿಸಬಹುದಾಗಿದೆ ಎಂದು ಗಣಕ ಭಾಷಾಶಾಸ್ತ್ರಜ್ಞ ಮತ್ತು ವಿದ್ವಾಂಸ ಪ್ರೊ.ಕೆ.ಪಿ.ರಾವ್ ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನ ಆಶ್ರಯದಲ್ಲಿ ನಡೆದ ಡಿಕೋಡಿಂಗ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವಿಷಯದ ಕುರಿತು ಮಾತನಾಡಿದ ಅವರು ಸಂಗೀತ, ಕಥನ ಕಲೆ, ವೀಡಿಯೊ ಎಡಿಟಿಂಗ್ ಮತ್ತು ಮಾಧ್ಯಮದಂತಹ ಸೃಜನಶೀಲ ಕ್ಷೇತ್ರಗಳಲ್ಲಿ ‘ಎಐ’ನಿಂದ ಬಹು ಉಪಯೋಗಗಳನ್ನು ಹೊಂದಬಹುದು ಎಂದು ಹೇಳಿದರು. ಆದಾಗಿಯೂ, ಕೃತಕ ಬುದ್ಧಿಮತ್ತೆಯು ಅಂತಿಮವಾಗಿ ಮಾನವನ ಬುದ್ಧಿವಂತಿಕೆಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅವರು ಹೇಳಿದರು. ತಾಂತ್ರಿಕ ಪ್ರಗತಿಯನ್ನು ನಿಲ್ಲಿಸಲು ಸಾಧ್ಯವಿಲ್ಲ, ಆದ್ದರಿಂದ ನಾವು ಎಚ್ಚರಿಕೆಯಿಂದ ಅದನ್ನು ಉಪಯೋಗಿಸಬೇಕು. ಇದನ್ನು ಮಾನವ ಕಲ್ಯಾಣಕ್ಕಾಗಿ, ವಿಶೇಷವಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ನಾವು ನೋಡಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಅವರು ದತ್ತಾಂಶ, ಮಾಹಿತಿ ಮತ್ತು ಕೃತಕ ಬುದ್ಧಿಮತ್ತೆಯ ಜ್ಞಾನವನ್ನು ನಿಭಾಯಿಸಲು ಅಗತ್ಯವಾದ ಬುದ್ಧಿವಂತಿಕೆಯ ಕುರಿತು ಮಾತನಾಡಿದರು. ತನಿಷ್ಕಾ ಕೋಟ್ಯಾನ್ ಸಂವಾದವನ್ನು ನಿರ್ವಹಿಸಿದರು. ಡಾ.ರೇಸ್ಮಿ ಭಾಸ್ಕರನ್, ಥಾಮಸ್, ಡಾ.ಜನಾರ್ದನ್ ಹಾವಂಜೆ ಮತ್ತಿತರರು ಉಪಸ್ಥಿತರಿದ್ದರು.