ವಿದ್ಯಾಗಿರಿ, ಫೆ.13: ಮನಸ್ಸು, ದೇಹ ಹಾಗೂ ಹೃದಯವನ್ನು ಸಮರ್ಪಿಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ. ಅವುಗಳಿಂದ ನಿಮ್ಮ ಆಂತರಿಕ ಸಾಮರ್ಥ್ಯ ಹೆಚ್ಚಳವಾಗುತ್ತದೆ ಎಂದು ಬೆಂಗಳೂರಿನ ಪ್ರಾರ್ಥನಾ ಶಾಲೆ ಕರ್ಣ ಬೆಳೆಗೆರೆ ಹೇಳಿದರು. ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು, ಸ್ನಾತಕೋತ್ತರ ವ್ಯವಹಾರ ಆಡಳಿತ ವಿಭಾಗದ ‘ಎಂಬಿಎ ಆಗಮನ 2024 ರ’ ಸಲುವಾಗಿ ಉದ್ಯಮಶೀಲತಾ ಅಭಿವೃದ್ಧಿ ಕೋಶ (ಇಡಿಸಿ)ದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡ ಯುವ ಉದ್ಯಮ ಶೀಲತಾ ಶೃಂಗಸಭೆಯಲ್ಲಿ ಅವರು ಮಾತನಾಡಿದರು. ಮ್ಯಾನೇಜ್ಮೆಂಟ್ ಆಫ್ ಬಿಸಿನೆಸ್ ಆಡ್ಮಿಸ್ಟ್ರೇಷನ್ (ಎಂಬಿಎ)ಗೆ ಹೊಸ ವ್ಯಾಕ್ಯನ ನೀಡಿದ ಅವರು, ಮೈಂಡ್, ಬಾಡಿ, ಆರ್ಟ್ (ಹಾರ್ಟ್) ಸರಿಯಾದ ಮಿಳಿತವೇ ಉನ್ನತಿಗೆ ರಹದಾರಿ. ಉತ್ತಮ ಸಂವಹನ ಕಲೆ ಇದ್ದಾಗ ಉದ್ಯಮದಲ್ಲಿ ಯಶಸ್ಸು ಪಡೆಯಲು ಸಾಧ್ಯ. ಅವಕಾಶಗಳು ಅಪರಿಮಿತ. ಯುವಜನತೆ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಜೀವನದಲ್ಲಿ ಏರುಪೇರು ಸಾಮಾನ್ಯ. ಅಂತಹ ಸಮಸ್ಯೆಗಳಿಂದ ಮೇಲೆ ಬರಲು ಯತ್ನಿಸಬೇಕು. ನನಗೆ ನನ್ನ ಅಪ್ಪ ಯಾವಾಗಲೂ ಹೇಳುತ್ತಿದ್ದರು. ‘ನಿನಗೆ ಏಕೆ ಕರ್ಣ ಎಂದು ಹೆಸರಿಟ್ಟಿದ್ದೇನೋ ಗೊತ್ತಿಲ್ಲ. ನೀನು ಕುಂಭಕರ್ಣ’ ಎಂದು. ಆದರೆ, ಜವಾಬ್ದಾರಿ ನಿಭಾಯಿಸಿದ ಕಾರಣ ಈ ಹಂತಕ್ಕೆ ಬಂದಿದ್ದೇನೆ ಎಂದರು.
ಬ್ರೈಟ್ ಫ್ಲೆಕ್ಸಿ ಇಂಟರ್‌ನ್ಯಾಷನಲ್ ವ್ಯವಸ್ಥಾಪಕ ನಿರ್ದೇಶಕ ಅಭಿನವ್ ಬನ್ಸಾಲ್ ಮಾತನಾಡಿ, ಉದ್ಯಮಶೀಲತೆಯಲ್ಲಿ ಆವಿಷ್ಕಾರ ಅವಶ್ಯ. ಸಮಯಕ್ಕೆ ಸರಿಯಾಗಿ ಸ್ಪಂದಿಸಬೇಕು. ಗುಣಮಟ್ಟದ ಸೇವೆ ನೀಡಿದರೆ, ಗ್ರಾಹಕರು ನಿಮ್ಮ ಉತ್ಪನ್ನ ಖರೀದಿಸುತ್ತಾರೆ ಎಂದರು. ಉದ್ಯಮಿ ಹಾಗೂ ಪ್ರಾರ್ಥನಾ ಶಾಲೆಯ ಸಹಸಂಸ್ಥಾಪಕಿ ಲಕ್ಷ್ಮೀ ಶಿವರಾಮ ಮಾತನಾಡಿ, ವಿನಯದಿಂದ ಇದ್ದರೆ ನಾವು ಜಗದಗಲ ಬೆಳೆಯಲು ಸಾಧ್ಯ. ನಾಯಕತ್ವ ಎಂದರೆ ಕೆಲಸ ಮಾಡುವುದನ್ನು ಪ್ರೀತಿಸುವುದು, ಸಹಾನುಭೂತಿ, ಪ್ರಶಂಸೆ, ನಿರ್ಣಯ, ಶಕ್ತಿ, ಪ್ರತಿಫಲನ ಎಂದರು. ಅಡಿಕೆ ಚಹಾ ಸೃಷ್ಟಿಕರ್ತ ನಿವೆಧನ್ ನೆಂಪೆ ಮಾತನಾಡಿ, ಎಲ್ಲರೂ ಉದ್ಯೋಗ ಹುಡುಕುತ್ತಿದ್ದರೆ, ನಾನು ಉದ್ಯೋಗ ಹೇಗೆ ನೀಡುವುದು ಎಂದು ಚಿಂತಿಸುತ್ತಿದ್ದೆನು. ನನ್ನ ಬಳಿ ಯಾರಾದರೂ ಮುಂದಿನ ಗುರಿ ಬಗ್ಗೆ ವಿಚಾರಿಸಿದಾಗ, ಎಮ್‌ಜಿಎಮ್‌ಟಿ ಕೋರ್ಸ್ ಮಾಡುತ್ತೇನೆ ಎಂದಿದ್ದೆ, ಅದರ ವಿಸ್ತೃತರೂಪ ಮ್ಯಾನೇಜ್ಮೆಂಟ್ ಆಫ್ ಗದ್ದೆ, ಮನೆ ತೋಟ ಎಂದಾಗ ಎಲ್ಲರೂ ನಕ್ಕಿದ್ದರು. ಇದೀಗ ಅದೇ ಕೋರ್ಸ ನನ್ನ ಕೈಹಿಡಿದು ಸರಿಸುಮಾರು 500 ಕೋಟಿಯಷ್ಟು ವಾರ್ಷಿಕ ವ್ಯವಹಾರ ಮಾಡುವಂತಾಯಿತು ಎಂದರು. ನಾನು ಆರಂಭದಲ್ಲಿ ಅಡಿಕೆ ಕಾಫಿಯನ್ನು ನೀಡಿದಾಗ ಹಲವರು ಅದನ್ನು ಎಮ್ಮೆ ಮುಸರೆ ಎಂದರು. ಆಗ ನಾನು ಯೋಚಿಸಿದೆ. ಈ ಎಮ್ಮೆಗಳಿಗೆ ಯಾಕೆ
ಕೊಡಬೇಕು. ಗ್ರಾಹಕರಿಗೆ ನೀಡಿದೆ. ಅದು ಅಂತರರಾಷ್ಟ್ರೀಯ ಬ್ರ್ಯಾಂಡ್ ಆಯಿತು. ನಿಮ್ಮನ್ನು ನೀವೇ ಪ್ರೇರೇಪಿಸಬೇಕು. ನಿಮ್ಮ ವಿರುದ್ಧದ ಎಲ್ಲ ಕಾಮೆಂಟ್‌ಗಳಿಗೆ ನೀವು ಉತ್ತರಿಸಬೇಕಾಗಿಲ್ಲ ಎಂದರು. ಟ್ರಯಲ್‌ಬೇಸರ್ ಬಿಸ್‌ನೆಸ್ ಸರ್ವೀಸ್ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶೀಲ್ ಶೆಟ್ಟಿ ಮಾತನಾಡಿ, ‘ದೊಡ್ಡ ಯಶಸ್ಸಿಗೆ ಸಣ್ಣ ಹೆಜ್ಜೆ ಮುಖ್ಯ. ಸೋಲಿಗೆ ಭಯಪಡಬೇಡಿ. ಅನುಭವದಿಂದ ಕಲಿಯಿರಿ ಎಂದರು.
ಉಡುಪಿಯ ಉಜ್ವಲ್ ಡೆವಲರ‍್ಸ್ನ ಅಜಯ್ ಪಿ ಶೆಟ್ಟಿ ಮಾತನಾಡಿ, ಭಾರತ ಯುವಜನತೆಯಿಂದ ಕೂಡಿರುವ ದೇಶ. ಈ ಸಮುದಾಯಕ್ಕೆ ಸರಿಯಾದ ಅವಕಾಶಗಳು ಸಿಗುವಂತಾಗಬೇಕು. ನಿಮ್ಮಲ್ಲಿ ಉತ್ತಮ ಸ್ಟಾರ್ಟ್ಅಪ್ ಐಡಿಯಾಗಳಿದ್ದರೆ, ಹಣಕಾಸಿನ ನೆರವಿಗೆ ನಮ್ಮ ಸಂಸ್ಥೆಯನ್ನು ಸಂಪರ್ಕಿಸಬಹುದು, ಆಳ್ವಾಸ್ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು. ಗ್ರೀನ್ ಮಂಕಿ ಫಾರ್ಮ್ಸ್ನ ವೃಜ್ವಲ್ ಮಾತನಾಡಿ, ಯಾವುದೇ ಕೆಲಸದಲ್ಲಿ ಅಂದಾಜಿನ ರಿಸ್ಕ್ ತೆಗೆದುಕೊಂಡಾಗ, ಸಾಧಿಸಲು ಸಾಧ್ಯ. ನನ್ನ ಯಶಸ್ಸಿನ ಗುಟ್ಟು ಇದೆ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಚರ್ಚಾನಿರ್ವಾಹಕರಾಗಿ ಕಾರ‍್ಯಕ್ರಮವನ್ನು ನಡೆಸಿಕೊಟ್ಟರು. ಎಂಬಿಎ ವಿಭಾಗದ ಸಂಯೋಜಕಿ ಪ್ರಿಯಾ ಸಿಕ್ವೇರಾ ವಂದಿಸಿದರು. ಪೂಜಾ ಸಿ ಕಾರ‍್ಯಕ್ರಮ ನಿರೂಪಿಸಿದರು.