ಮಂಗಳೂರು, ಫೆ.11: ಮಂಗಳೂರಿನ ಸಂತ ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯೊಬ್ಬರು ಹಿಂದೂಗಳು ಅತ್ಯಂತ ಶ್ರದ್ಧಾ ಭಕ್ತಿಯಿಂದ ಪೂಜಿಸುವ ಪ್ರಭು ಶ್ರೀರಾಮನ ಬಗ್ಗೆ ಅವಹೇಳನ ಮಾಡಿದ ಆರೋಪ ಕೇಳಿ ಬಂದಿದ್ದು, ಇದು ಖಂಡನೀಯ ಮತ್ತು ಇಂತಹ ಧರ್ಮವಿರೋಧಿ ಮನಸ್ಥಿತಿಯನ್ನು ಸಹಿಸಲು ಸಾಧ್ಯವೇ ಇಲ್ಲವೆಂದು ಶಾಸಕ ವೇದವ್ಯಾಸ್ ಕಾಮತ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಶಾಲೆಯ ಏಳನೇ ತರಗತಿಯ ಪಾಠದ ಸಮಯದಲ್ಲಿ ಶಿಕ್ಷಕಿಯೋರ್ವರು ವಿನಾಕಾರಣ ಹಿಂದೂ ಧರ್ಮ, ಶ್ರೀರಾಮ ಹಾಗೂ ದೇಶದ ಪ್ರಧಾನಿ ಮೋದಿಯವರನ್ನು ಮಕ್ಕಳ ಮುಂದೆ ಕೀಳುಮಟ್ಟದ ಪದಗಳಲ್ಲಿ ಅವಮಾನಿಸಿ ವಿಷ ಬೀಜ ಬಿತ್ತಲು ಯತ್ನಿಸಿರುವುದು ಮತ್ತು ತಮ್ಮ ಧೋರಣೆಯನ್ನು ಮಕ್ಕಳ ಮೇಲೆ ಹೇರಿರುವುದು ಅಕ್ಷಮ್ಯವಾಗಿದೆ. ಸರ್ವಧರ್ಮದ ಮಕ್ಕಳು ಬೆರೆತಿರುವ ಶಾಲೆಗಳಲ್ಲಿ ಯಾವುದೇ ಧರ್ಮದ ಅವಹೇಳನ ಮಾಡುವುದು ಸಲ್ಲ. ಅದರಲ್ಲೂ ಶಿಕ್ಷಕರೇ ಇಂತಹ ದುರ್ವರ್ತನೆ ತೋರಿದರೆ ಅದಕ್ಕೆ ಕ್ಷಮೆಯೇ ಇಲ್ಲ ಎಂದರು. ಈಗಾಗಲೇ ಹಲವಾರು ಮಕ್ಕಳ ಪೋಷಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಮಕ್ಕಳಿಗೆ ತಪ್ಪು ಸಂದೇಶ ನೀಡಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವ ಶಿಕ್ಷಕಿಯ ಮೇಲೆ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಾಲೆಯ ಆಡಳಿತ ಮಂಡಳಿಗೆ ಆಗ್ರಹಿಸುತ್ತೇನೆ ಎಂದು ಶಾಸಕರು ಹೇಳಿದರು.