ಉಡುಪಿ, ಫೆ. 8: ಮಾಯಾ ಎಸ್ ಪೈ ಅವರಿಗೆ ಪ್ರತಿಷ್ಠಿತ ‘ಅಭಿನಾಶ್ ನಾಹಾ ಮೆಮೋರಿಯಲ್ ವಾಲಂಟಿಯರ್ ಸರ್ವಿಸಸ್ ಪ್ರಶಸ್ತಿ’ ಲಭಿಸಿದೆ. ಮಣಿಪಾಲ ಮಾಹೆಯಲ್ಲಿ ವ್ಯಾಸಂಗ ಮಾಡುವಾಗ ಮಾಯಾ ಅವರು ಸಲ್ಲಿಸಿದ ಅನುಕರಣೀಯ ಸೇವೆ ಮತ್ತು ಅವರ ಸಾಧನೆಗಳನ್ನು ಗುರುತಿಸಿ ಅಭಿನಾಶ್ ನಾಹಾ ಮೆಮೋರಿಯಲ್ ವಾಲಂಟಿಯರ್ ಸರ್ವಿಸಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ಡಾ. ಕೆ. ಶ್ರೀಧರ್ ಆರ್. ಪೈ ಮತ್ತು ಡಾ. ಕೆ. ಉಷಾ ಎಸ್. ಪೈ ದಂಪತಿಗಳ ಪುತ್ರಿ. ಮಾಯಾ ಎಸ್ ಪೈ ಪ್ರಸ್ತುತ ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್‌ನಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿದ್ದಾರೆ.
ಲಿಟಲ್ ರಾಕ್ ಇಂಡಿಯನ್ ಶಾಲೆಯಲ್ಲಿ ಹತ್ತನೇ ತರಗತಿಯವರೆಗೆ ಓದಿರುವ ಇವರು ಉಡುಪಿಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪಡೆದರು. ಆ ಸಂದರ್ಭದಲ್ಲೇ ಸಾಮಾಜಿಕ ಕಳಕಳಿ ಮೈಗೂಡಿಸಿಕೊಂಡ ಮಾಯಾ ಅವರು, ಉಡುಪಿಯ ಸರ್ಕಾರಿ ಶಾಲೆಗಳಿಗೆ ಉಚಿತ ವರ್ಚುವಲ್ ತರಗತಿಗಳನ್ನು ಒದಗಿಸುವ ಮಹಾಮಾಯಾ ಫೌಂಡೇಶನ್‌ನಲ್ಲಿ ಬೋಧನಾ ಸಹಾಯಕರಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.