ಲಕ್ನೋ, ಫೆ.6: ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಚತುರ್ಥ ಕೃಷ್ಣಪೂಜಾ ಪರ್ಯಾಯದ ಅವಧಿಯಲ್ಲಿ ಕೋಟಿ ಗೀತಾ ಲೇಖನ ಯಜ್ಞದ ಮೊದಲ ಹಂತವಾಗಿ ಲಕ್ಷ ಗೀತಾ ಲೇಖನಗಳ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅಪೇಕ್ಷಿಸಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಆಹ್ವಾನಿಸುವ ಸಲುವಾಗಿ ಶ್ರೀಗಳ ಸೂಚನೆಯಂತೆ ಪರ್ಯಾಯ ಸಮಿತಿ ಕಾರ್ಯಾಧ್ಯಕ್ಷ ಮಾಜಿ ಶಾಸಕ ಕೆ ರಘುಪತಿ ಭಟ್ ಅವರು ಮಂಗಳವಾರ ಲಕ್ನೋದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿ ಶ್ರೀಗಳ ಭಿನ್ನಹವನ್ನು ಅರ್ಪಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ವಿನಂತಿಸಿದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶ್ರೀಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಕೋಟಿ ಗೀತಾ ಲೇಖನ ಯಜ್ಞವನ್ನು ಮುಕ್ತವಾಗಿ ಪ್ರಶಂಸಿಸಿ ತಮ್ಮನ್ನು ಆಹ್ವಾನಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ವಾಸುದೇವ ಭಟ್ ಪೆರಂಪಳ್ಳಿ, ಬಿಜೆಪಿ ಪ್ರಮುಖರಾದ ಮಹೇಶ್ ಠಾಕೂರ್, ಸುವರ್ಧನ್ ನಾಯಕ್ ಉಪಸ್ಥಿತರಿದ್ದರು.