ಮಣಿಪಾಲ, ಜ.31: ಜಗತ್ತಿನ ಎಲ್ಲಾ ನೃತ್ಯ ಪ್ರಕಾರಗಳಲ್ಲಿ ಕೆಲವು ಸಾಮಾನ್ಯ ಅಂಶಗಳಿದ್ದು ಎಲ್ಲರನ್ನೂ ಕಲೆಯ ಬಲೆಯಲ್ಲಿ ಒಂದುಗೂಡಿಸುವುದೇ ನೃತ್ಯಕಲೆಯ ಉದ್ದೇಶವಾಗಿದೆ ಎಂದು ಟರ್ಕಿ ದೇಶದ ಎಗೆ ವಿಶ್ವವಿದ್ಯಾಲಯದ ಪ್ರೊ ಗುರ್ಬುಜ್ ಅಕ್ತಾಶ್ ಹೇಳಿದರು. ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್, ಮಾಹೆ, ಇದರ ಆಶ್ರಯದಲ್ಲಿ ಟರ್ಕಿ ದೇಶದ ಪಾರಂಪರಿಕ ನೃತ್ಯ ಪ್ರಕಾರಗಳ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಸಾಮುದಾಯಿಕ ನೃತ್ಯವಂತೂ ಎಲ್ಲರ ಜೊತೆ ಕುಣಿದು ಸಂಭ್ರಮಿಸುತ್ತಾ ಎಲ್ಲರ ಸುಖ ದುಃಖಗಳಲ್ಲಿ ಭಾಗಿಯಾಗುವ ಹಂಬಲವನ್ನೇ ಹೊಂದಿದೆ. ಎಲ್ಲರೂ ಕುಳಿತು ನೋಡಿ ಸಂಭ್ರಮಿಸುವ ನೃತ್ಯಕ್ಕೆ ಈ ಉದ್ದೇಶವಿದೆ. ವಿವಿಧ ದೇಶ-ಪ್ರದೇಶಗಳ ನೃತ್ಯಪ್ರಕಾರಗಳಲ್ಲಿ ಅನೇಕ ಸಾಂಸ್ಕೃತಿಕ ಭಿನ್ನತೆಗಳಿದ್ದರೂ ಅನೇಕ ಸಾಮಾನ್ಯ ಅಂಶಗಳೂ ಇವೆ. ವೈಶಿಷ್ಟ್ಯತೆಯನ್ನು ಉಳಿಸಿಕೊಂಡೇ ಅದನ್ನು ಮೀರಿ ಮೂಡುವ ಏಕತೆಯೇ ನಮ್ಮೆಲ್ಲರ ಉದ್ದೇಶವಾಗಿದೆ ಎಂದು ಪ್ರೊ ಗುರ್ಬುಜ್ ಅಕ್ತಾಶ್ ಹೇಳಿದರು.
ಟರ್ಕಿ ದೇಶದ ಹಲವು ಪ್ರದೇಶಗಳ ವಿಶಿಷ್ಟ ನೃತ್ಯ ಪ್ರಕಾರಗಳನ್ನು ವಿಡಿಯೋ ವಿವರಣೆಗಳ ಮೂಲಕ ಪರಿಚಯಿಸಿದ ಅವರು ಅಲ್ಲಿಯ ಜಾನಪದ ಮತ್ತು ಪಾರಂಪರಿಕ ನೃತ್ಯಕಲೆಗಳನ್ನು ಗುರುತಿಸಿದರು. ಅಲ್ಲಿಯ ನೃತ್ಯಕಲೆಗಳ ಹೆಜ್ಜೆ ಕುಣಿತ, ಸಂಗೀತ, ಪೋಷಾಕು ಮತ್ತು ಕಲಾತ್ಮಕತೆಗಳನ್ನು ವಿವರಿಸಿದರು. ಭಾರತೀಯ ನೃತ್ಯಭಂಗಿಗಳನ್ನು ಹೋಲುವ ದೃಶ್ಯಗಳನ್ನು ತೋರಿಸಿ ತಮ್ಮ ವಿಚಾರಗಳನ್ನು ಪ್ರಸ್ತುತಪಡಿಸಿದರು. ಜಿಸಿಪಿಎಎಸ್ ನ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ ಇವರು ಪಾರಂಪರಿಕ ಮತ್ತು ಆಧುನಿಕ ಕಲೆಗಳ ನಡುವಿನ ಸಂವಾದದ ಅಗತ್ಯವನ್ನು ಒತ್ತಿ ಹೇಳಿದರು. ನೃತ್ಯ ವಿದುಷಿ ಡಾ.ಭ್ರಾಮರಿ ಶಿವಪ್ರಕಾಶ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಪ್ರೊ.ಗುರ್ಬುಜ್ ಅಕ್ತಾಶ್ ನೃತ್ಯದ ಮೂಲಕ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಭಾಗಿಯಾದರು. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರನ್ನು ನೆನೆಯಲಾಯಿತು.