ಗಂಗೊಳ್ಳಿ, ಜ.28: ಉತ್ತಮ ವಿಚಾರಗಳನ್ನು ಪ್ರೋತ್ಸಾಹಿಸಲು ನಾವು ಸದಾ ಸಿದ್ಧರಿರಬೇಕು. ಆಗ ಮಾತ್ರ ಉತ್ತಮ ಸಮಾಜದ ನಿರ್ಮಾಣವಾಗಲು ಸಾಧ್ಯ ಎಂದು ಉಡುಪಿ ಕರ್ನಾಟಕ ಬ್ಯಾಂಕ್ ಶಾಖೆಯ ಸೀನಿಯರ್ ಮ್ಯಾನೇಜರ್ ರವೀಂದ್ರ ಶ್ಯಾನುಭಾಗ್ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯಲ್ಲಿ ನಡೆದ ಪಂಚಗಂಗಾವಳಿ ಬಳಗದ 30ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಸ್ವಾದಿಸುವುದರ ಜೊತೆ ಜೊತೆಗೆ ನಮ್ಮ ಸಂಸ್ಕೃತಿಯ ಅರಿವನ್ನು ಮೂಡಿಸಿಕೊಳ್ಳುವಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು. ಧರ್ಮ ವಿರೋಧಿ ಮನಸ್ಥಿತಿಗಳಿಗೆ ನೇರವಾಗಿಯೇ ಉತ್ತರಿಸುವ ಕ್ಷಾತ್ರ ತೇಜಸ್ಸನ್ನು ಬೆಳೆಸಿಕೊಳ್ಳಬೇಕು ಎಂದರು.
ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷರಾದ ಸದಾಶಿವ ಖಾರ್ವಿ ಕಂಚುಗೋಡು, ಬಳ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರತ್ನ ಚರಗ, ಬೆಂಗಳೂರಿನ ಸೊಸೈಟಿ ಜನರಲ್ ಗ್ಲೋಬಲ್ ಸೊಲ್ಯೂಷನ್ ಚಾಪ್ಟರ್ ಮ್ಯಾನೇಜರ್ ರಣಜಿತ್ ಪೂಜಾರಿ, ಎಕ್ಸ್ಸೆಂಚರ್ ಸೀನಿಯರ್ ಸೊರ್ಸಿಂಗ್ ಸ್ಪೆಷಲಿಸ್ಟ್ ಅಶ್ವಿನಿ ರಣಜಿತ್ ಪೂಜಾರಿ, ಉದ್ಯಮಿ ರಾಮದಾಸ್ ಕೆ ಮೇಸ್ತ, ಪಂಚಗಂಗಾವಳಿ ವಿದ್ಯಾನಿಧಿ ಯೋಜನೆಯ ಸಂಚಾಲಕರಾದ ಜಿ ಪುರುಷೋತ್ತಮ್ ಆರ್ಕಾಟಿ ಮೊದಲಾದವರು ಉಪಸ್ಥಿತರಿದ್ದರು. ರಾಷ್ಟ್ರೀಯ ಮಟ್ಟದ ದೇಹದಾಢ್ಯ ಪಟು ಸೋಮಶೇಖರ ಖಾರ್ವಿ ಅವರನ್ನು ಸನ್ಮಾನಿಸಲಾಯಿತು. ಪಂಚಗಂಗಾವಳಿ ವಿದ್ಯಾನಿಧಿ ಯೋಜನೆಯ ಅಂಗವಾಗಿ ಸಾಧಕ ವಿದ್ಯಾರ್ಥಿಗಳಾದ ಶ್ರೇಯಾ ಮೇಸ್ತ, ವೈಷ್ಣವಿ ಖಾರ್ವಿ, ನವೀನ್ ಖಾರ್ವಿ, ಪ್ರಾರ್ಥನಾ ಪೈ, ಆರ್ಯನ್ ವಿ. ಕೆ, ಶ್ರೇಜಸ್ ಮತ್ತು ಆರಾಧ್ಯ ಆರ್ ಇವರನ್ನು ಗೌರವಿಸಿ ಅಭಿನಂದಿಸಲಾಯಿತು. ಪಂಚಗಂಗಾವಳಿ ಸ್ವಾಸ್ಥ್ಯ ನಿಧಿ ಯೋಜನೆಯ ವತಿಯಿಂದ ಹದಿನೈದು ಫಲಾನುಭವಿಗಳಿಗೆ ಆರ್ಥಿಕ ನೆರವನ್ನು ವಿತರಿಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಜೋಡಿ ಹಕ್ಕಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಬೆಂಗಳೂರಿನ ನಿಶಿತಾ ಮತ್ತು ಅಪ್ಪಾಜಿ ಹಾಗೂ ದ್ವಿತೀಯ ಸ್ಥಾನ ಪಡೆದ ಸ್ವಾತಿ ಮಡಿವಾಳ ಮತ್ತು ಗಣೇಶ್ ಮೂಡಬಿದ್ರೆ ದಂಪತಿಗಳನ್ನು ಸನ್ಮಾನಿಸಲಾಯಿತು.
ಬಳಗದ ಅಧ್ಯಕ್ಷ ಜಿ.ಎನ್. ದಿಲೀಪ್ ಖಾರ್ವಿ ಸ್ವಾಗತಿಸಿದರು. ಜ್ಯೋತಿ ಎಸ್ ಸಂದೇಶ ವಾಚಿಸಿದರು. ಶೋಭಾ ಎಸ್ ಅರ್ಕಾಟಿ ವರದಿ ವಾಚಿಸಿದರು. ಪಲ್ಲವಿ ಜಿ ಬಹುಮಾನದ ಪಟ್ಟಿ ವಾಚಿಸಿದರು. ಸುಂದರ ಜಿ ಕಾರ್ಯಕ್ರಮ ನಿರೂಪಿಸಿದರು. ರೇಖಾ ಆರ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪಿಂಗಾರ ಕಲಾವಿದೆರ್ ಬೆದ್ರ ಇವರಿಂದ ಕದಂಬ ನಾಟಕ ಪ್ರದರ್ಶನಗೊಂಡಿತು.