ಉಡುಪಿ, ಜ.26: ಜಿಲ್ಲೆಯ ವಿವಿಧೆಡೆ 75ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಅಜ್ಜರಕಾಡು: ಉಡುಪಿ ಜಿಲ್ಲಾಡಳಿತ ವತಿಯಿಂದ ಅಜ್ಜರಕಾಡಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಧ್ವಜಾರೋಹಣ ನೆರವೇರಿಸಿ, ಗೌರವ ರಕ್ಷೆ ಸ್ವೀಕರಿಸಿದರು. ಶಾಸಕರಾದ ಯಶ್ಪಾಲ್ ಎ ಸುವರ್ಣ, ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್.ಕೆ., ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಯಾಲ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಆಕರ್ಷಕ ಪಥಸಂಚಲನ ನಡೆಯಿತು. ಸಂವಿಧಾನದ ಮೌಲ್ಯ ಹಾಗೂ ಧ್ಯೇಯಗಳನ್ನು ಜನಸಾಮಾನ್ಯರಿಗೆ ಅರಿವು ಮೂಡಿಸುವ ಸಂವಿಧಾನ ಜಾಗೃತಿ ಜಾಥಾಕ್ಕೆ ಸಚಿವರು ಚಾಲನೆ ನೀಡಿದರು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ಬಾರ್ಕೂರು ಸರ್ಕಾರಿ ಕಾಲೇಜು: ಬಾರ್ಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 75ನೇ ಗಣರಾಜ್ಯೋತ್ಸವ ಆಚರಣೆ ಜರುಗಿತು.
ಪ್ರಾಂಶುಪಾಲರಾದ ಡಾ. ರಮೇಶ್ ಆಚಾರ್ ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವದ ಸಂದೇಶವನ್ನು ನೀಡಿದರು. ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶೃತಿ ಆಚಾರ್ಯ ಎನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಮಟ್ಟದ ಚುನಾವಣಾ ಸಾಕ್ಷರತಾ ಸ್ಪರ್ಧೆಗಳಲ್ಲಿ ವಿಜೇತರಾದ ಕಾಲೇಜಿನ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಚುನಾವಣಾ ಸಾಕ್ಷರತಾ ಸಮಿತಿಯ ಸಂಚಾಲಕರಾದ ರಾಧಾಕೃಷ್ಣ ನಾಯಕ್ ನೆರವೇರಿಸಿದರು. ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ, ಎನ್ಸಿಸಿ ಕ್ಯಾಡೆಟ್ಸ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್: ಉಡುಪಿಯ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ 75ನೇ ಗಣರಾಜ್ಯೋತ್ಸವನ್ನು ಉಡುಪಿ ಮಳಿಗೆಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಖಾ ವ್ಯವಸ್ಥಾಪಕರಾದ ಪುರಂದರ ತಿಂಗಳಾಯ ಧ್ವಜಾರೋಹಣ ನೆರೆವೇರಿಸಿ ಗಣರಾಜ್ಯೋತ್ಸವ ಸಂದೇಶ ನೀಡಿದರು. ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆ: ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ ೭೫ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಮಾಜಿ ಸೈನಿಕ ವಾಸು ಮೊಗೇರರವರು ನೆರವೇರಿಸಿದರು. ಈ ಸಂದರ್ಭ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಒ ಹಾಗೂ ಕಾ.ಜ್ಞಾ.ಪ.ಪೂ.ಕಾ ಪ್ರಾಂಶುಪಾಲ ದಿನೇಶ್.ಎಂ.ಕೊಡವೂರ್, ಉಪಪ್ರಾಂಶುಪಾಲ ಸಾಹಿತ್ಯ, ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರಾಂಶುಪಾಲೆ ಉಷಾ ರಾವ್ ಯು, ಉಪಪ್ರಾಂಶುಪಾಲೆ ವಾಣಿ. ಕೆ., ಪಿ.ಆರ್,ಒ. ಜ್ಯೋತಿ ಪದ್ಮನಾಭ ಭಂಡಿ, ಲೆಪ್ಟಿನೆಂಟ್ ಮಂಜುನಾಥ್ ಮುದೂರ್, ಎನ್.ಸಿ.ಸಿ. ಆಫಿಸರ್ ಸುಮಿತ್. ಇ ಉಪಸ್ಥಿತರಿದ್ದರು.
ಎಸ್.ವಿ.ಎಸ್. ಹಾಗೂ ತ್ರಿಶಾ ಸಂಸ್ಥೆಗಳು: ಕಟಪಾಡಿಯ ಎಸ್.ವಿ.ಎಸ್. ಸಂಸ್ಥೆಗಳು ಹಾಗೂ ತ್ರಿಶಾ ಸಂಸ್ಥೆಯಿಂದ ಗಣರಾಜ್ಯೋತ್ಸವದ ಆಚರಣೆ ಎಸ್.ವಿ.ಎಸ್ ಶಾಲೆಯ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈ. ಲಿ. ಇದರ ವ್ಯವಸ್ಥಾಪಕರಾದ ಶ್ರೀಧರ್ ರಾವ್ ಮಾತನಾಡಿ, ಭಾರತದ ವಿವಿಧತೆಯಲ್ಲಿ ಏಕತೆಯನ್ನು ನಾವೆಲ್ಲರೂ ಅನುಭವಿಸಬೇಕು ಜೊತೆಗೆ ನಾವೆಲ್ಲರೂ ಒಂದೇ ಎನ್ನುವ ಸಂವಿಧಾನದ ಅಡಿಯಲ್ಲಿ ಬದುಕಬೇಕು ಎಂದರು. ಎಸ್.ವಿ.ಎಸ್. ವಿದ್ಯಾವರ್ಧಕ ಸಂಘದ ಸಂಚಾಲಕರಾದ ಸತ್ಯೇಂದ್ರ ಪೈ, ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಸಿ.ಎ ಗೋಪಾಲಕೃಷ್ಣ ಭಟ್, ತ್ರಿಶಾ ವಿದ್ಯಾ ಕಾಲೇಜು ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜು, ತ್ರಿಶಾ ವಿದ್ಯಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು, ಎಸ್.ವಿ.ಎಸ್. ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿ ಆಲ್ಡ್ರಿನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕೆದಿಂಜೆ: ಕೆದಿಂಜೆ ಶ್ರೀ ವಿದ್ಯಾ ಬೋಧಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಹಳೆ ವಿದ್ಯಾರ್ಥಿ ಸಂಘ, ಮಕ್ಕಳ ಕ್ಷೇಮಾಭಿವೃದ್ಧಿ ಸಮಿತಿ ಹಾಗೂ ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ನ ಸಂಯುಕ್ತ ಆಶ್ರಯದಲ್ಲಿ ಕೆದಿಂಜೆ ಶ್ರೀ ವಿದ್ಯಾ ಬೋಧಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜೋತ್ಸವ ಸಂಭ್ರಮ ಜರಗಿತು. ಕೆದಿಂಜೆ ಶಾಲಾ ಮಕ್ಕಳ ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸೂರ್ಯಕಾಂತ್ ಶೆಟ್ಟಿ ಅವರು ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಶಿಕ್ಷಕರಾದ ಪ್ರಥ್ವೀರಾಜ್ ಬಲ್ಲಾಳ್, ಕೆದಿಂಜೆ ಶಾಲಾ ಮಕ್ಕಳ ಕ್ಷೇಮಾಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರಾದ ಎನ್. ತುಕಾರಾಮ ಶೆಟ್ಟಿ, ಫ್ರೆಂಡ್ಸ್ ಕ್ಲಬ್ನ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ, ಕೆದಿಂಜೆ ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಗೌರವ ಸದಸ್ಯರಾದ ಅಕ್ಷತ್ ಬೋಳ, ಕೆದಿಂಜೆ ಶಾಲಾ ಸಹಶಿಕ್ಷಕಿ ರೇಖಾ ಪೈ, ಶಾಲಾ ನಾಯಕಿ ಪ್ರಾರ್ಥನಾ ಬಂಗೇರ, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಎಚ್.ಎಮ್.ಎಮ್.ವಿ.ಕೆ.ಆರ್ ಶಾಲೆ: ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ 75ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಕುಂದಾಪುರದ ವಿದ್ಯುತ್ ಗುತ್ತಿಗೆದಾರ ಕೆ. ರತ್ನಾಕರ್ ನಾಯಕ್ ಮುಖ್ಯ ಅತಿಥಿಯಾಗಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶುಭಾ ಕೆ.ಎನ್ ಗಣರಾಜ್ಯೋತ್ಸವದ ಸಂದೇಶವನ್ನು ನೀಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಶಿಕ್ಷಕಿ ಸುಗುಣಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.