ನವದೆಹಲಿ, ಜ.23: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೀವನ ಮತ್ತು ಕೊಡುಗೆ ದೇಶದ ಯುವಕರಿಗೆ ಸ್ಫೂರ್ತಿಯಾಗಿದೆ ಮತ್ತು ಅವರ ಪರಂಪರೆಯೊಂದಿಗೆ ಜನರನ್ನು ಸಂಪರ್ಕಿಸಲು ಸರ್ಕಾರ ಕಳೆದ 10 ವರ್ಷಗಳಲ್ಲಿ ಪ್ರಯತ್ನಗಳನ್ನು ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಮಂಗಳವಾರ ನೇತಾಜಿ ಸುಭಾಸ್ ಚಂದ್ರ ಬೋಸ್ ಜನ್ಮದಿನದ ಪ್ರಯುಕ್ತ ಕೆಂಪು ಕೋಟೆಯಲ್ಲಿ ನಡೆದ ಪರಾಕ್ರಮ್ ದಿವಸ್ ಆಚರಣೆಯಲ್ಲಿ ಭಾಗವಹಿಸಿ ಪ್ರಧಾನಿ ಮಾತನಾಡಿದರು. ಸಾರ್ವಭೌಮತ್ವದ ಕೊರತೆಯು ಆಡಳಿತಕ್ಕೆ ಸಂಬಂಧಿಸಿಲ್ಲ ಎಂದು ನೇತಾಜಿಗೆ ತಿಳಿದಿತ್ತು, ಅದು ಆಲೋಚನೆ ಮತ್ತು ಕಾರ್ಯಗಳಲ್ಲಿಯೂ ಇದೆ ಎಂದು ತಿಳಿದ ಅವರು, ಯುವಜನರನ್ನು ಜಾಗೃತಗೊಳಿಸುವತ್ತ ಗಮನ ಹರಿಸಿದರು. ನಿನ್ನೆ ಇಡೀ ಜಗತ್ತು ಭಾರತದ ಸಾಂಸ್ಕೃತಿಕ ಪ್ರಜ್ಞೆಯಲ್ಲಿ ಐತಿಹಾಸಿಕ ಮೈಲಿಗಲ್ಲು ಕಂಡಿದೆ. ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆಯ ಶಕ್ತಿಯನ್ನು ಇಡೀ ಜಗತ್ತು ಮತ್ತು ಇಡೀ ಮಾನವಕುಲವು ಅನುಭವಿಸಿದೆ ಎಂದು ಪ್ರಧಾನಿ ಹೇಳಿದರು.
ಇದೇ ಸಂದರ್ಭದಲ್ಲಿ ಭಾರತ್ ಪರ್ವ್ 2024 ಅನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದರು. ಭಾರತ್ ಪರ್ವ್ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಆದರ್ಶಗಳ ಪ್ರತಿಬಿಂಬವಾಗಿದೆ. ಈ ಪರ್ವ ವೋಕಲ್ ಫಾರ್ ಲೋಕಲ್ ಗೆ ಧ್ವನಿಯಾಗಲು, ಪ್ರವಾಸೋದ್ಯಮವನ್ನು ಉತ್ತೇಜಿಸಲು, ವೈವಿಧ್ಯತೆಯನ್ನು ಗೌರವಿಸಲು ಮತ್ತು ‘ಏಕ್ ಭಾರತ್ ಶ್ರೇಷ್ಠ್ ಭಾರತ್’ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಾಕ್ಷಿಯಾಗಲಿ ಎಂದರು.