ಬದುಕಿನಲ್ಲಿ ಪಾತ್ರಗಳು ಎಷ್ಟು ಮುಖ್ಯವೋ, ಆಯ್ಕೆ ಕೂಡ ಅಷ್ಟೇ ಮುಖ್ಯವಾಗುತ್ತದೆ. ಕಾರಣ ಜಗತ್ತಿನಲ್ಲಿ ಎರಡು ರೀತಿ ನಟಿಸುವವರಿದ್ದಾರೆ. ಒಂದು ಬಣ್ಣ ಹಚ್ಚಿ ನಟಿಸೋರು, ಎರಡನೆಯದು ಬಣ್ಣ ಹಚ್ಚದೇ ನಟಿಸೋರು. ವ್ಯತ್ಯಾಸ ಇಷ್ಟೇ, ಮೊದಲನೆಯವರು ರಂಗದ ಮೇಲೆ ನಟಿಸಿದರೆ, ಎರಡನೆಯವರು ವ್ಯಕ್ತಿಗಳ ಬದುಕಿನಲ್ಲಿ ನಟಿಸುವ ಹೀನ ಮನಸ್ಥಿತಿ ಉಳ್ಳವರು.
ಜಗತ್ತು ವಿಶಾಲವಾಗಿ, ಅಷ್ಟೇ ವೇಗವಾಗಿ ಬದಲಾಗುತ್ತಾ ಹೋಗುತ್ತಿದೆ. ವಿಚಿತ್ರವೋ ವಿಶಿಷ್ಟವೋ ವಿಚಾರಗಳು, ಯೋಚನೆಗಳು, ಆಸೆ, ಆಚರಣೆಗಳು ಹೀಗೆ ಇನ್ನೂ ಹಲವು ವಿಷಯಗಳು ಕಾಲಕ್ಕೆ ತಕ್ಕಂತೆ ವೇಷ ಬದಲಿಸುತ್ತಿವೆ. ಹೀಗಿರುವಾಗ ಬದುಕಿನಲ್ಲಿ ವೇಷ ಮರೆಸಿಕೊಂಡು ಬರುವ ಅನೇಕ ಪಾತ್ರಗಳು ತಮ್ಮ ನಟನೆಯಲ್ಲಿ ನಾವೇ ಒಂದು ಕೈ ಮೇಲು ಅಂದುಕೊಂಡು ಮುಂದುವರೆಯುತ್ತದೆ. ಈ ಪಾತ್ರಗಳಿಗೆ ಸ್ನೇಹ-ಪ್ರೀತಿ, ಅಣ್ಣ-ಅಕ್ಕ, ತಂಗಿ-ತಮ್ಮ ಹೀಗೆ ನಾನಾ ಹೆಸರುಗಳಿವೆ ಎಂಬುವುದು ನಿಮಗೂ ತಿಳಿದಿರಬಹುದು. ಹಾಗಿದ್ದರೆ ಈ ಎಲ್ಲಾ ಆಕಸ್ಮಿಕ ಆಗಮನದ ಪಾತ್ರಗಳು ಶಾಶ್ವತವೇ? ನಿಮ್ಮನ್ನು ನೀವು ಎಂದಾದರು ಪ್ರಶ್ನಿಸಿದ್ದೀರಾ? ಪ್ರಶ್ನಿಸಿಕೊಂಡಿದ್ದೇ ಆದಲ್ಲಿ ಎಲ್ಲವೂ ಸರಿ ಇದೆಯೇ? ಇಲ್ಲವಾದಲ್ಲಿ, ಎಡವಿದ್ದೆಲ್ಲಿ? ಅನ್ನುವ ನೂರಾರು ಪ್ರಶ್ನೆಗಳು ತಲೆತುಂಬಾ ಹರಿದಾಡಿದರೂ, ಪಾತ್ರಗಳು ಮಾತ್ರ ಹಾಯಾಗಿರುತ್ತವೆ ಬೆದರು ಬೊಂಬೆಯಂತೆ. ಕೆಲವೊಮ್ಮೆ ನಾವೆಷ್ಟು ವಿಚಲಿತರಾಗುತ್ತೇವೆ ಎಂದರೆ ಪಾತ್ರಗಳಿಲ್ಲದೆ ಜೀವನವೇ ಮುಗಿದು ಹೋಯಿತು ಎನ್ನುವಷ್ಟು. ಅದೇಕೆ ಇನ್ನೊಬ್ಬರ ಮೇಲೆ ಅಷ್ಟೊಂದು ಅವಲಂಬನೆ ಎಂದು ತಿಳಿಯುವಷ್ಟರಲ್ಲಿ ಎಲ್ಲವೂ ಕತ್ತಲಾಗಿರುತ್ತದೆ. ಹಾಗೆಯೇ ಹೊರಬರುವಷ್ಟರಲ್ಲಿ ಎಲ್ಲರ ಕಣ್ಣಲ್ಲಿ ತಪ್ಪಿತಸ್ಥರಂತೆ ಬಿಂಬಿತರಾಗಿರುತ್ತೇವೆ.
ಬದುಕಿನಲ್ಲಿ ಪಾತ್ರಗಳು ಮುಖ್ಯ ಅನ್ನುವ ಸತ್ಯ ಇನ್ನಷ್ಟು ಕಹಿಯಾಗಿದೆ. ಪ್ರತಿಯೊಂದು ಹೆಜ್ಜೆಯಲ್ಲು ಒಂದೊಂದು ತೆರನಾದ ಪಾತ್ರಗಳು ಸುತ್ತುವರಿದು ನೆಲೆಯೂರಲು ಪ್ರಯತ್ನಿಸುತ್ತದೆ. ಸನಿಹ ಸುಳಿಯುವ ಎಲ್ಲಾ ಪಾತ್ರಗಳು ಒಂದೊಳ್ಳೆ ನಿಶಾನೆ ನೀಡುತ್ತವೆ ಎಂದರೆ ತಪ್ಪು, ಹಾಗಂತ ಎಲ್ಲವೂ ತಪ್ಪು ಅನ್ನುವುದು ಕೂಡ ತಪ್ಪು. ಹಾಗಾಗಿ ಎಲ್ಲವೂ ಕೈ ಮೀರಿ ನಡೆಯುವ ಮುನ್ನ ಆಲೋಚಿಸುವುದು ಉತ್ತಮ. ಪ್ರತಿಯೊಂದು ಪಾತ್ರಗಳ ಆಯ್ಕೆ ನಮ್ಮ ಬದುಕಿಗೆ ಒಳಿತಾಗುವಂತೆ ಇರಲಿ, ಅದೇ ರೀತಿ ಆ ಪಾತ್ರಕ್ಕೂ ಒಳಿತಾಗಲಿ ಅನ್ನುವ ಹಾಗೆ ಇರಲಿ.
-ವಿಜಿತ ಅಮೀನ್ ಬಂಟ್ವಾಳ