ಉಡುಪಿ, ಜ.17: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಯಾರಿಗೆ ಸ್ಪರ್ಧಿಸಲು ಅವಕಾಶ ನೀಡುತ್ತಾರೆ ಅನ್ನೊದೆ ಒಂದು ಪ್ರಶ್ನಾರ್ಥಕವಾಗಿದೆ. ಈಗಾಗಲೇ ಎರಡು ಬಾರಿ ಸಂಸದರಾಗಿರುವ ಶೋಭಾ ಕರಂದ್ಲಾಜೆಯವರಿಗೆ ಬೇರೆ ಕ್ಷೇತ್ರದಲ್ಲಿ ಅವಕಾಶ ಸಿಗಲಿ, ಉಡುಪಿ ಕ್ಷೇತ್ರಕ್ಕೆ ಸೂಕ್ತ ಮತ್ತು ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಎಂಬ ಚರ್ಚೆಗಳು ಜಾಲತಾಣಗಳಲ್ಲಿ ನಿತ್ಯ ಎಂಬಂತೆ ನಡೆಯುತ್ತಿದೆ. ಕಾಂಗ್ರೆಸ್ ನಿಂದ ಜಯಪ್ರಕಾಶ್ ಹೆಗ್ಡೆ ಅವರಿಗೆ ಟಿಕೆಟ್ ಬಹುತೇಕ ಖಚಿತ ಎಂಬ ಸುದ್ಧಿಯೂ ಹರಿದಾಡುತ್ತಿದೆ. ಬಹುಜನ ಬೆಂಬಲವಿರುವ ಹೆಗ್ಡೆ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದ್ರೆ ಬಿಜೆಪಿಯಿಂದ ಪ್ರಮೋದ್ ಮಧ್ವರಾಜ್ ಸ್ಪರ್ಧಿಸಿದರೆ ಮಾತ್ರ ಕಮಲ ಪಾಳಯಕ್ಕೆ ಗೆಲುವು ಸಾಧ್ಯ ಎಂಬ ಚರ್ಚೆಗಳು ಗರಿಗೆದರಿದೆ.
ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡುತ್ತಿರುವ ಪ್ರಮೋದ್ ಮಧ್ವರಾಜ್ ಅವರು ‘ನಾನು ಕೂಡ ಆಕಾಂಕ್ಷಿ’ ಎಂದು ತುಂಬಾ ಸಮಯದ ಹಿಂದೇನೆ ಘೋಷಣೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತವನ್ನು ಮೆಚ್ಚಿ ಬಿಜೆಪಿಗೆ ಬಂದಿರುವ ಅಪಾರ ಕಾರ್ಯಕರ್ತರ ಬೆಂಬಲವಿರುವ ಪ್ರಮೋದ್ ಮಧ್ವರಾಜ್ ಅವರಿಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಬೇಕೆಂದು ಬೇರೆ ಬೇರೆ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರದ ಹಿರಿಯರಿಗೆ ಮನವಿ ಪತ್ರಗಳು ಸಲ್ಲಿಕೆಯಾಗಿವೆ.
ಹಾಲಿ ಸಂಸದೆ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮತ್ತೆ ಉಡುಪಿಯ ಟಿಕೆಟ್ ಸಿಗಬಹುದೇ? ಅಥವಾ ಬೇರೆ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಸಿಗುವುದೇ? ಉಡುಪಿಯ ಟಿಕೆಟ್ ಸಿಟಿ ರವಿ ಅವರಿಗೆ ಸಿಗುವ ಸಾಧ್ಯತೆಯಿದೆಯೇ? ಅಥವಾ ಕೊನೆಯುಸಿರು ಇರುವವರೆಗೂ ಬಿಜೆಪಿಯಲ್ಲೇ ಪಕ್ಷ ಸಂಘಟನೆ ಮಾಡುವೆ ಎಂದು ಹಲವಾರು ಬಾರಿ ಹೇಳಿರುವ ಪ್ರಮೋದ್ ಮಧ್ವರಾಜ್ ಅವರಿಗೆ ಉಡುಪಿ ಚಿಕ್ಕಮಗಳೂರು ಟಿಕೆಟ್ ಸಿಗಬಹುದೇ? ನಮಗೆ ನಮ್ಮ ಊರಿನವರೇ ಸಂಸದರಾಗಬೇಕು ಎಂಬ ಕೂಗು ಹಲವಾರು ಬಾರಿ ಉಡುಪಿ ಜಿಲ್ಲೆಯಿಂದ ಕೇಳಿಬಂದಿದ್ದು, ಕಾರ್ಯಕರ್ತರ ನಡುವೆಯೇ ಇರುವ, ನಿರರ್ಗಳವಾಗಿ ಹಿಂದಿ, ಇಂಗ್ಲಿಷ್, ಕನ್ನಡದಲ್ಲಿ ಮಾತನಾಡಬಲ್ಲ ಪ್ರಮೋದ್ ಮಧ್ವರಾಜ್ ಅವರಿಗೆ ಟಿಕೆಟ್ ನೀಡಿ ಎಂಬ ಚರ್ಚೆ ಜಾಲತಾಣಗಳಲ್ಲಿ ನಡೆಯುತ್ತಿದೆ. ಬಿಜೆಪಿ ಟಿಕೆಟ್ ಯಾರಿಗೆ ಎಂಬುದು ಸದ್ಯಕ್ಕೆ ಯಕ್ಷಪ್ರಶ್ನೆಯಾಗಿದೆ.