ಉಡುಪಿ, ಜ.16: ಉಡುಪಿಯ ಶ್ರೀಕೃಷ್ಣ ಮಠದ ಪರ್ಯಾಯ ನಾಡಹಬ್ಬದ ರೀತಿಯಲ್ಲಿ ವೈಭವದಿಂದ ನಡೆಯುತ್ತದೆ. ಇದೀಗ ಪುತ್ತಿಗೆ ಶ್ರೀಗಳವರ ಪರ್ಯಾಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೈಸೂರು ದಸರಾ ಮೆರವಣಿಗೆಯ ರೀತಿಯಲ್ಲಿ ಪರ್ಯಾಯ ಮೆರವಣಿಗೆಯ ವೈಭವವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆಮೂಲೆಗಳಿಂದ ಜನರು ಉಡುಪಿಗೆ ಆಗಮಿಸುತ್ತಾರೆ. ಈ ಬಾರಿ ವಿದೇಶಿಯರ ದಂಡೇ ಆಗಮಿಸಲಿದೆ. ಜನವರಿ 18 ರ ಬೆಳಗಿನ ಜಾವ ಸುಮಾರು 2.30 ಗಂಟೆಗೆ ಆರಂಭವಾಗುವ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಜನವರಿ 17 ರಾತ್ರಿ ಸುಮಾರು 8 ಗಂಟೆಯಿಂದಲೇ ಉಡುಪಿ ನಗರದ ರಸ್ತೆಯ ಇಕ್ಕೆಲಗಳಲ್ಲಿ ಜನರು ನಿದ್ದೆಬಿಟ್ಟು ಕಾಯುತ್ತಾರೆ. ಮೆರವಣಿಗೆಯ ನಂತರ ಐತಿಹಾಸಿಕ ದರ್ಬಾರ್ ನಡೆಯಲಿದೆ. ಇದೆಲ್ಲಾ ಮುಗಿಯುವಾಗ ಮುಂಜಾನೆ 7.30 ಆಗಬಹುದು. ಕೆಲವೇ ಘಂಟೆಗಳ ನಂತರ ಪರ್ಯಾಯದ ಮೊದಲನೆಯ ದಿನದ ಅಂಗವಾಗಿ ಸಂಭ್ರಮದ ಭೋಜನ ಪ್ರಸಾದ ವಿತರಣೆ ನಡೆಯಲಿದೆ. ಜನವರಿ 18 ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ರಜೆ ಇಲ್ಲದ ಕಾರಣ ಪರ್ಯಾಯದ ಸೊಬಗನ್ನು ಕಣ್ತುಂಬಿಕೊಳ್ಳುವುದು ಹೇಗೆ ಎಂಬುದು ವಿದ್ಯಾರ್ಥಿಗಳ ಪ್ರಶ್ನೆಯಾಗಿದೆ.
ಮಂಗಳೂರು ವಿಶ್ವವಿದ್ಯಾನಿಲಯ ಪದವಿ ಪರೀಕ್ಷೆಗಳು ನಡೆಯುತ್ತಿರುವ ಕಾರಣ ಸಾರ್ವತ್ರಿಕವಾಗಿ ರಜೆ ಘೋಷಣೆ ಮಾಡಲು ಸಾಧ್ಯವಿಲ್ಲ. ಪರೀಕ್ಷೆ ಇಲ್ಲದ ವಿದ್ಯಾಸಂಸ್ಥೆಗಳಿಗೆ ಆಯಾ ಸಂಸ್ಥೆಗಳ ಮುಖ್ಯಸ್ಥರಿಗೆ ರಜೆ ನೀಡಲು ಸಂಬಂಧಪಟ್ಟ ಇಲಾಖೆ ಸೂಚನೆ ನೀಡಿದರೆ, ಯುವ ಮನಸ್ಸುಗಳಿಗೂ ಪರ್ಯಾಯದ ಸೊಬಗನ್ನು ಕಣ್ತುಂಬಿಕೊಳ್ಳಲು ಆಗುತ್ತದೆ ಎಂಬುದು ಪರ್ಯಾಯ ನೋಡಲು ಆಸಕ್ತಿಯಿರುವ ವಿದ್ಯಾರ್ಥಿಗಳ ಅಭಿಪ್ರಾಯ.