Monday, November 25, 2024
Monday, November 25, 2024

ಶಾಲಾ ವಾರ್ಷಿಕೋತ್ಸವದಲ್ಲಿ ರಂಗಭೂಮಿ ಸ್ಪರ್ಶ ನೀಡಿದ ನಾಟಕ ಪ್ರದರ್ಶನ

ಶಾಲಾ ವಾರ್ಷಿಕೋತ್ಸವದಲ್ಲಿ ರಂಗಭೂಮಿ ಸ್ಪರ್ಶ ನೀಡಿದ ನಾಟಕ ಪ್ರದರ್ಶನ

Date:

ಶಾಲಾ ವಾರ್ಷಿಕೋತ್ಸವ ಅಂದ ಮೇಲೆ ವಿದ್ಯಾರ್ಥಿಗಳ ಸಂಭ್ರಮ, ಹಳೆ ವಿದ್ಯಾರ್ಥಿಗಳ ಸಮ್ಮಿಲನ, ಶಿಕ್ಷಕರ ಶ್ರಮದೊಂದಿಗೆ ಹಲವಾರು ತೆರೆ ಮರೆಯ ಪ್ರತಿಭೆಗಳ ಅನಾವರಣಕ್ಕೆ ಸೂಕ್ತ ವೇದಿಕೆ ನಿರ್ಮಾಣವಾಗುತ್ತದೆ. ಬ್ರಹ್ಮಾವರ ತಾಲ್ಲೂಕಿನ ಸಾಯ್ಬ್ರಕಟ್ಟೆ ಶಾಲೆಯ ತೊಂಭತ್ತು ವರುಷ ಪೂರೈಸಿ ಶತಕದತ್ತ ದಾಪುಗಾಲಿಡುತ್ತಿರುವ ಸುಸಂದರ್ಭದಲ್ಲಿ ತೊಂಭತ್ತರ ತೋರಣ ಎನ್ನುವ ನಾಮಾಂಕಿತದೊಂದಿಗೆ, ಶಾಲಾ ವಿದ್ಯಾರ್ಥಿಗಳ, ಹಳೆ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೊಂದು ವೇದಿಕೆ ನಿರ್ಮಾಣಕ್ಕೆ ಶಾಲೆಯ ಸಮಾನ ಮನಸ್ಕರ ತಂಡದಿಂದ ಸಾಧ್ಯವಾಗಿದೆ. ಮಕ್ಕಳ ರಂಗಾಭಿರುಚಿಗೆ ಒತ್ತು-ಪೌರಣಿಕ ಬರ್ಬರಿಕ ನಾಟಕ ಪ್ರಸ್ತುತಿ ಶಾಲಾ ವಾರ್ಷಿಕೋತ್ಸವದಲ್ಲಿ ನವ ನವೀನತೆ ಇರಬೇಕು ಎನ್ನುವ ಉತ್ಸಾಹದಲ್ಲಿ ರಂಗಭೂಮಿಯ ಸ್ಪರ್ಶ ಮೂಡಬೇಕು ಎನ್ನುವ ಹಂಬಲದಲ್ಲಿ ಒಂದಿಷ್ಟು ಪ್ರಯೋಗ ಈ ವೇದಿಕೆ ಮೂಲಕ ನಡೆದು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೊಸದೊಂದು ಭಾಷ್ಯ ಬರೆಯಲು ವಾರ್ಷಿಕೋತ್ಸವ ತಂಡ ಸಜ್ಜಾಯಾಯಿತು. ಇದನ್ನು ಜಾರಿಗೊಳಿಸಲು ಪಣ ತೊಟ್ಟವರು ಅದೇ ಶಾಲಾ ಶಿಕ್ಷಕ ಶ್ರೀ ಸುರೇಂದ್ರ ಕೋಟ ಅವರು. ಸರಕಾರಿ ಶಾಲಾ ಶಿಕ್ಷಕರ ತಂಡ ನಿರ್ಮಿಸಿ, ಅಭಿನಯಿಸಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದ ಬರ್ಬರೀಕ ನಾಟಕವನ್ನು ಮಕ್ಕಳ ಮೂಲಕ ಪ್ರದರ್ಶನ ಮಾಡುವ ಇಂಗಿತ ವ್ಯಕ್ತಪಡಿಸಿ ಅದನ್ನು ಕಾರ್ಯಗತಗೊಳಿಸಿ ಯಶಸ್ಸನ್ನು ಕಂಡು ಎಲ್ಲರ ಕಣ್ಮನ ಸೆಳೆಯುವಂತೆ ಮಾಡಿ ಎಲ್ಲರಿಂದಲೂ ಶ್ಲಾಘನೆ ಪಡೆದುದರ ಯಶಸ್ಸಿನ ಬಹು ಪಾಲು ಇವರಿಗೆ ಸಲ್ಲಬೇಕು.

ಮಹಾಭಾರತದ ಕಥನದಲ್ಲಿ ಹಾಗೇ ಮಿಂಚಿ ಮರೆಯಾದಂತೆ ಬಂದು ಹೋಗುವ ಪಾತ್ರ ಬರ್ಬರೀಕ. ಘಟೋತ್ಕಚನ ಮಗನಾದ ಈತನ ತಾಯಿ ಕೃಷ್ಣನಿಂದ ಹತನಾದ ಮುರಾಸುರನ ಪುತ್ರಿ. ಮಹಾಪರಾಕ್ರಮಿಯೂ ಅಜೇಯನೂ ಆಗಿದ್ದ ಈತ ಮಹಾಭಾರತ ಯುದ್ಧಕ್ಕೂ ಮುನ್ನವೇ ಹತನಾಗುತ್ತಾನೆ. ಭಾರತ ಯುದ್ಧದಲ್ಲಿ ಭಾಗವಹಿಸುವ ಮಹದಾಸೆ ಹೊತ್ತವ ಯುದ್ಧಕ್ಕೆ ಮೊದಲೇ ತನ್ನ ರಕ್ತತರ್ಪಣ ನೀಡುತ್ತಾನೆ, ರಣಕಂಬವನ್ನೇರಿ ಕುಳಿತ ಆತನ ರುಂಡ ಸಂಪೂರ್ಣ ಭಾರತ ಯುದ್ಧವನ್ನು ವೀಕ್ಷಿಸುತ್ತದೆ. ಕಾಂತಾರದ ವರಾಹ ರೂಪಂ ಹಾಡಿನ ಸೃಷ್ಟಿಕರ್ತರಾದ ಶಶಿರಾಜ್ ಕಾವೂರು ವಿರಚಿತ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳಿಸಿದ ನಾಟಕ ಬರ್ಬರೀಕ. ಬರ್ಬರೀಕ ಮತ್ತು ಹಿಡಿಂಬೆಯ ವಾತ್ಸಲ್ಯದ ಸುತ್ತ ಹೆಣೆಯಲ್ಪಟ್ಟಿದೆ. ಬರ್ಬರೀಕನ ಪರಾಕ್ರಮ, ಅವನ ಜನಗಳು ಅವನ ಮೇಲಿಟ್ಟ ಅಭಿಮಾನ, ಕೃಷ್ಣನ ತಂತ್ರಗಾರಿಕೆ, ಪಾಂಡವರ ಅಸಹಾಯಕತೆ, ಬರ್ಬರೀಕನ ಬಲಿದಾನ, ಹಿಡಿಂಬೆ ಮತ್ತು ಮೌರ್ವಿಯ ರೋದನೆ, ಬದುಕಿನ ಕಟುಸತ್ಯವನ್ನು ತೀರಾ ಸಹಜವಾಗಿ ಸ್ವೀಕರಿಸುವ ಘಟೋತ್ಕಚನ ಮೌನ ಎಲ್ಲವೂ ವೀಕ್ಷಕರನ್ನು ಕಾಡದೇ ಇರದು. ನಾಟಕದ ಸಂದೇಶ ಇದುವೇ ಎಂದು ನಿರ್ದಿಷ್ಟವಾಗಿ ಬೊಟ್ಟು ಮಾಡಿ ಹೇಳದೇ ಇರುವುದು ಈ ನಾಟಕದ ವಿಶೇಷತೆ. ಕೃಷ್ಣನ ಧರ್ಮಸಂಸ್ಥಾಪನೆಯ ಸಂಕಲ್ಪದೊಂದಿಗೆ ಮೊದಲ್ಗೊಳ್ಳುವ ನಾಟಕ, ಕೃಷ್ಣನ ಮಾತುಗಳ ಮೂಲಕ ಬರ್ಬರೀಕನ ಹತ್ಯೆಯ ಅನಿವಾರ್ಯತೆಯನ್ನು ಹೇಳುತ್ತದೆ. ಹಿಡಿಂಬೆಯ ಆಕ್ರೋಶ ವೀಕ್ಷಕರೆಲ್ಲರ ಮನದಲ್ಲೂ ಆಕ್ರೋಶ ಮೂಡಿಸಿದರೂ, ತನ್ನ ಸಾವಿನ ಕುರಿತಾದ ಕೃತಾರ್ಥತೆಯನ್ನು ವ್ಯಕ್ತಪಡಿಸುವ ಬರ್ಬರೀಕನ ಮಾತುಗಳು ಅವನ ತ್ಯಾಗ ವ್ಯರ್ಥವಾಗದು ಎಂಬ ಭಾವವನ್ನೂ ಮೂಡಿಸುತ್ತದೆ. ಆ ಮೂಲಕ ವಿಭಿನ್ನ ದೃಷ್ಟಿಕೋನಗಳಿಂದ ನಾಟಕವನ್ನು ಗ್ರಹಿಸುವ ಸ್ವಾತಂತ್ರ‍್ಯವನ್ನು ವೀಕ್ಷಕನಿಗೆ ಕೊಡುತ್ತದೆ.

ನಾಟಕದ ಹಿಂದಿನ ಶಕ್ತಿಯಾಗಿ ವಿನ್ಯಾಸ ಮತ್ತು ಬೆಳಕಿನ ಸಂಯೋಜನೆ ಬಿ.ಎಸ್.ರಾಮ್ ಶೆಟ್ಟಿ, ವರ್ಣಲಂಕಾರ ಮತ್ತು ವಸ್ತ್ರ ವಿನ್ಯಾಸ, ರಮೇಶ್ ಕಪಿಲೇಶ್ವರ, ಹಿನ್ನೆಲೆ ಗಾಯನ ಮತ್ತು ಚಂಡೆಯಲ್ಲಿ, ಗುರುಪ್ರಸಾದ್ ಮಾರಣಕಟ್ಟೆ, ಸಂಗೀತ, ವಿಜಯ್ ಕುಮಾರ್ ಕುಂಭಾಶಿ, ಮಕ್ಕಳನ್ನು ತರಬೇತುಗೊಳಿಸಿದವರು ಸುರೇಂದ್ರ ಕೋಟ ನೆರವು ನೀಡಿದರು. ತಾಯಿ ಮಗನ ಬಾಂಧವ್ಯದ ಸರಪಳಿಯಲ್ಲಿ ಅಮ್ಮಾ ನಿನ್ನ ಬಿಟ್ಟು ಹೋಗಲಾರೆ. ನಾಟಕ ಅಂದ ಕೂಡಲೇ ಏನಾದರೂ ಸಮಾಜಕ್ಕೊಂದು ಸಂದೇಶ ನೀಡುವಂತಿರಬೇಕು. ಮಕ್ಕಳ ಮುಖೋನ ಸಮಾಜಕ್ಕೆ ಸಂದೇಶ ನೀಡಲು ಹೊರಟ ಈ ಪ್ರಯತ್ನಕ್ಕೆ ಶ್ಲಾಘೀಸಲೇಬೇಕು. ತಾಯಿ ಮಗನ ಕಾಯುವಿಕೆಯಲ್ಲಿ ಚಡಪಡಿಸುವ ಕಾಯಕದಲ್ಲಿ ಇದ್ದರೆ ಮಗ ಮಾತ್ರ ಆರಿಸಕೊಂಡಿದ್ದು ನಮ್ಮನ್ನೆಲ್ಲ ಕಾಯುವ ಕಾಯಕ ಅಂದರೆ ದೇಶ ಕಾಯುವ ಕಾಯಕ. ತನ್ನ ಮಗನ ಬಗ್ಗೆ ನಂಬಿಕೆಯ ಪರ್ವತವನ್ನೆ ಇರಿಸಕೊಂಡ ತಾಯಿಯ ಮನದಾಳಕ್ಕೆ ಮಗ ನೀಡಿದ್ದು ದೇಶ ಹೆಮ್ಮೆ ಪಡುವ ಕಾರ್ಯ. ಯೋಧನಾದ ಮಗ ಹೆಣವಾಗಿ ಬಂದರೂ ಒಂದು ಹನಿ ಕಣ್ಣಿರು ಹಾಕದೆ ನನ್ನ ಮಗನ ಬಗ್ಗೆ ಹೆಮ್ಮೆಯಿಂದ ಆ ತಾಯಿ ನಡೆದುಕೊಂಡ ರೀತಿಗೆ ಪ್ರೇಕ್ಷಕರ ಮನ ಅತ್ತಿದ್ದು ಸುಳ್ಳಲ್ಲ. ಚಿಕ್ಕ ವಯಸ್ಸಿನಲ್ಲಿ ಮಕ್ಕಳಲ್ಲಿ ದೇಶದ ಬಗ್ಗೆ ಅಭಿಮಾನ ಮೂಡಿಸುವ ಪ್ರಯತ್ನ ಹಾಗೂ ಮಕ್ಕಳ ಮೂಲಕ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ರವಾನಿಸುವ ಇರಾದೆಗೆ ಇದರ ಹಿಂದಿನ ಶಕ್ತಿಗಳಿಗೆ ತಲೆ ಬಾಗಲೇಬೇಕು.

ಈ ನಾಟಕದ ಸಂಪೂರ್ಣ ಜವಬಾರಿ ಹೊತ್ತು ರಚಿಸಿ, ನಿರ್ದೇಶಿಸಿದ ಶಿಕ್ಷಕರಾದ ಸುರೇಂದ್ರ ಕೋಟ ಅವರು ಹಾಗೆ ಇದಕ್ಕೆ ಬೆಂಬಲವಾಗಿ ನಿಂತವರು ಶಿಕ್ಷಕ ವೃಂದದವರು. ಮಕ್ಕಳನ್ನು ಪಠ್ಯದ ಜೊತೆ ಜೊತೆಗೆ ಮಕ್ಕಳಲ್ಲಿ ಸೃಜನ್ಮಾತಕ ಬೆಳವಣಿಗೆಗೆ ಸಹಕಾರಿಯಾಗಬಲ್ಲ ಇಂತಹ ಪ್ರಯೋಗಗಳು ನಡೆದರೆ ಮಕ್ಕಳಲ್ಲಿ ಅಡಕವಾಗಿರುವ ಪ್ರತಿಭೆ ಅನಾವರಣಕ್ಕೆ ಒಂದು ನಾಂದಿಯಾಗುತ್ತದೆ. ಇಂತಹ ರಂಗ ಚಟುವಟಿಕೆ ಇನ್ನಷ್ಟೂ ನಡೆದು ಮಕ್ಕಳು ರಂಗಭೂಮಿಯಲ್ಲಿನ ಆಸಕ್ತಿ ಮೂಡಿ ಪ್ರಬುದ್ಧ ಕಲಾವಿದರಾಗಿ ಮೂಡಿ ಬರಲಿ ಎನ್ನುವುದು ನಮ್ಮ ಆಶಯ.

ನನ್ನನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ದ ನಾಟಕ ಮತ್ತು ನನ್ನ ಪರಿಕಲ್ಪನೆಯ ನಾಟಕ ಮಕ್ಕಳಿಂದ ಮಾಡಿಸಬೇಕೆಂಬ ಬಯಕೆ ಇತ್ತು. ಪರದೆ ನಾಟಕದ ಪ್ರೇಕ್ಷಕರಿಗೂ ರಂಗಭೂಮಿ ನಾಟಕದ ರುಚಿ ಹತ್ತಿಸುವ ಇರಾದೆ ಇಟ್ಟುಕೊಂಡಿದ್ದೆ. ಮಕ್ಕಳ ಸಾಮರ್ಥ್ಯಕ್ಕೆ ವೇದಿಕೆ ಒದಗಿಸಿ ಎಳವೆಯಲ್ಲೇ ನಾಟಕಾಭಿನಯದ ಹಸಿವು ಹಚ್ಚುವ ಮೂಲಕ ಅವರನ್ನು ಸಕ್ರಿಯರನ್ನಾಗಿಸುವುದು ನನ್ನ ಉದ್ದೇಶವಾಗಿತ್ತು. ಮಕ್ಕಳು ಪ್ರಯತ್ನಕ್ಕೆ ಬಿದ್ದರೆ ಅದ್ಭುತ ನಟರು ಎಂಬುದನ್ನ ಸಾಧಿಸಿ ತೋರಿಸಿದ್ದು ಖುಷಿ ಕೊಟ್ಟಿದೆ. ಮಕ್ಕಳ ಎರಡೂ ನಾಟಕ ಜನ ಮನ ಗೆದ್ದಿದೆ. ಮಕ್ಕಳಿಗೆ ಶುಭಾಶಯಗಳು. ಅವರಿಗೆ ಇನ್ನೂ ಹೆಚ್ಚಿನ ವೇದಿಕೆ ಒದಗಿ ಬರಲಿ ಎಂದು ಆಶಿಸುತ್ತೇನೆ ಎಂದು ಹೇಳುತ್ತಾರೆ ನಾಟಕ ನಿರ್ದೇಶಕ ಹಾಗೂ ಶಿಕ್ಷಕರು ಸ.ಹಿ.ಪ್ರಾ.ಶಾಲೆ ಸಾಯ್ಬ್ರಕಟ್ಟೆ ಸುರೇಂದ್ರ ಕೋಟ.

ಮಕ್ಕಳ ಮನೋಜ್ಞ ಅಭಿನಯ ನಮ್ಮನ್ನೆ ಬೆರಗು ಮೂಡಿಸಿದೆ. ಸರಿಯಾದ ವೇದಿಕೆ ಸಿಕ್ಕಿದರೆ ಮಕ್ಕಳ ಪ್ರತಿಭೆ ಅನಾವರಣಕ್ಕೆ ಸಾಧ್ಯವಾಗುತ್ತದೆ ಎನ್ನುವುದನ್ನು ನಿರೂಪಿಸಿ ತೋರಿಸಿದ್ದಾರೆ. ಈ ಶ್ರಮದ ಹಿಂದೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗೆ ಆರ್ಹರು. ಇಂತಹ ಪ್ರಯತ್ನಳಿಗೆ ಪ್ರೋತ್ಸಾಹ ಅತ್ಯಗತ್ಯ. ಮುಂದಿನ ದಿನಗಳಲ್ಲಿ ಶಾಲಾ ಇಂತಹ ಪ್ರಯತ್ನಕ್ಕೆ ಹಳೆ ವಿದ್ಯಾರ್ಥಿ ಸಂಘ ಇದಕ್ಕೆ ಉತ್ತೇಜನ ನೀಡಲು ಸನ್ನದ್ಧ ಎನ್ನುತ್ತಾರೆ ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ.

-ಪ್ರಶಾಂತ್ ಸೂರ್ಯ ಸಾಯ್ಬ್ರಕಟ್ಟೆ

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!