ಮೂಡುಬಿದಿರೆ, ಜ.14: ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆಯಲ್ಲಿ ಅನನ್ಯ ಛಾಪು ಮೂಡಿಸಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಹಲವಾರು ಆವಿಷ್ಕಾರಿಕ ಕೊಡುಗೆಗಳನ್ನು ನೀಡುತ್ತಿದ್ದು, ‘ಆಳ್ವಾಸ್ ಸಂಶೋಧನಾ ನೀತಿ’ ಕರಡನ್ನು ಬಿಡುಗಡೆ ಮಾಡಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಎಂಬಿಎ ವಿಚಾರಸಂಕಿರಣ ಸಭಾಂಗಣದಲ್ಲಿ ‘ಶೈಕ್ಷಣಿಕ ಸಂಸ್ಥೆಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಪ್ರಸ್ತುತತೆ’ ಕುರಿತು ಹಮ್ಮಿಕೊಂಡ ಸಿಬ್ಬಂದಿ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಣಿಪಾಲ ಸ್ಕೂಲ್ ಆಫ್ ಲೈಫ್‌ಸೈನ್ಸ್ ನಿರ್ದೇಶಕ ಡಾ.ಬಿ.ಎಸ್. ಸತೀಶ್ ರಾವ್ ಕರಡು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ಸಂಶೋಧನೆ ಇಲ್ಲದೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಉಳಿವಿಲ್ಲ. ಅಧ್ಯಯನಕ್ಕೆ ಭವಿಷ್ಯವಿಲ್ಲ ಎಂದರು. ಜ್ಞಾನ- ವಿಜ್ಞಾನಗಳ ಸೌಂದರ್ಯವು ಸಂಶೋಧನೆಯಲ್ಲಿದೆ. ದೃಷ್ಟಿಕೋನ, ಕಾರ್ಯಕ್ರಮ, ಮೌಲ್ಯಗಳ ಮೂಲಕ ಈಗಾಗಲೇ ಜಗತ್ತಿನ ಜನರ ಹೃದಯಕ್ಕೆ ಪರಿಚಿತವಾಗಿರುವ ಆಳ್ವಾಸ್, ಸಂಶೋಧನಾ ಕ್ಷೇತ್ರದಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಪಿಎಚ್.ಡಿಯು ಅಧ್ಯಯನದ ಅಂತಿಮ ಘಟ್ಟವಲ್ಲ, ಅದು ಸೃಜನಶೀಲ ಸಂಶೋಧನೆ ಆರಂಭ ಎಂದರು. ಒಂದು ಸಂಸ್ಥೆಯಲ್ಲಿ ಅಭಿವೃದ್ಧಿ ಜೊತೆ ವ್ಯಕ್ತಿತ್ವಗಳ ಅಂತರ ದೂರ ಮಾಡಲು ನಾಯಕತ್ವ ಬಹುಮುಖ್ಯ. ಅಂತಹ ಸಂಬಂಧವನ್ನು ಕಟ್ಟಿಕೊಟ್ಟಿದ್ದೇವೆ. ಶಿಕ್ಷಣದ ಜೊತೆ ಇತರ ಚಟುವಟಿಕೆಗಳು, ನಿರ್ವಹಣಾ ಸಲಹಾ ಘಟಕ, ಕೈಗಾರಿಕಾ ಸಹಯೋಗದ ಜೊತೆ ನಾಲ್ಕನೇ ಹೆಜ್ಜೆಯಾಗಿ ಆಳ್ವಾಸ್ ಸಂಶೋಧನಾ ಕೇಂದ್ರ ಅಭಿವೃದ್ಧಿ ಪಡಿಸುತ್ತಿದ್ದೇವೆ ಎಂದರು. ಸಂಶೋಧನೆ, ಪೇಟೆಂಟ್ ಹಾಗೂ ಉತ್ಪಾದನೆಯ ದಿಶೆಯಲ್ಲಿ ಸಂಶೋಧನಾ ನೀತಿಯನ್ನು ರಚಿಸಿದ್ದು, ದೇಶದ ಪ್ರತಿಷ್ಠಿತ ಶೈಕ್ಷಣಿಕ ಮತ್ತು ಸಂಶೋಧನಾ ಕೇಂದ್ರಗಳ ತಜ್ಞರು ಕರಡು ರಚನೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ವಿವರಿಸಿದರು. ಹಿಂದೆ ಕಲಿಕೆಯ ಹಸಿವು ಹೆಚ್ಚಿದ್ದು, ಅವಕಾಶ ಕಡಿಮೆ ಇತ್ತು. ಈಗಿನ ಸ್ಥಿತಿ ತದ್ವಿರುದ್ಧವಾಗಿದೆ. ನಾವು ಯಾಕಾಗಿ ಸಂಶೋಧನೆ ಮಾಡುತ್ತೇವೆ ಎಂಬ ಅರಿವಿರಬೇಕು ಎಂದು ವಿಶ್ಲೇಷಿಸಿದರು. ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ವೇದಿಕೆ ಕಲ್ಪಿಸುವುದು ಆಳ್ವಾಸ್ ಆಶಯ. ಕನ್ನಡ ಶಾಲೆ, ಕ್ರೀಡಾ-ಸಾಂಸ್ಕೃತಿಕ ದತ್ತು, ನುಡಿಸಿರಿ, ವಿರಾಸತ್, ಪ್ರಗತಿ, ಸಿಎ ತರಬೇತಿ ಮತ್ತಿತರ ಕಾರ್ಯಕ್ರಮಗಳ ಮೂಲಕ ಆಳ್ವಾಸ್ ಸಶಕ್ತ ಶಿಕ್ಷಣ ನೀಡುತ್ತಿದೆ. ಮುಂದಿನ ಹೆಜ್ಜೆಯಾಗಿ ಆಳ್ವಾಸ್ ಸಂಶೋಧನಾ ಕೇಂದ್ರವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದರು.
ಎನ್.ಐ.ಟಿ.ಕೆ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಅರುಣ್ ಎಂ. ಇಸ್ಲೂರ್, ಆಳ್ವಾಸ್ ಸಂಶೋಧನೆ ಮತ್ತು ಅಭಿವೃದ್ಧಿ ಘಟಕದ ಮುಖ್ಯಸ್ಥ ಡಾ. ರಿಚರ್ಡ್ ಪಿಂಟೊ, ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಮಹಮದ್ ಸದಾಕತ್, ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ವನಿತಾ ಶೆಟ್ಟಿ, ಆಳ್ವಾಸ್ ಆತ್ಮ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಸುಬ್ರಹ್ಮಣ್ಯ ಪದ್ಯಾಣ, ಮಾನವ ಸಂಪನ್ಮೂಲ ಅಧಿಕಾರಿ ಭರತ್ ರೈ ಇದ್ದರು. ಎಂಬಿಎ ಪ್ರಾಧ್ಯಾಪಕಿ ಡಾ.ಕ್ಯಾಥರಿನ್ ನಿರ್ಮಲಾ ಕಾರ್ಯಕ್ರಮ ನಿರೂಪಿಸಿದರು. ಧ್ವನಿ ತಂಡವು ಪ್ರಾರ್ಥನೆ ನೆರವೇರಿಸಿತು.