ಬ್ರಹ್ಮಾವರ, ಜ.12: ಬಾರ್ಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಓರಿಯೆಂಟೇಷನ್ ಕಾರ್ಯಕ್ರಮ ಮತ್ತು ದಿ ಬೆಸ್ಟ್ ಟ್ಯಾಲೆಂಟ್ ಆಫ್ ಬಾರಕೂರು ಪಿ.ಜಿ ಸ್ಟಡಿ ಸೆಂಟರ್ ಸ್ಪರ್ಧೆ ಕಾಲೇಜಿನ ರೂಸಾ ಸಭಾಂಗಣದಲ್ಲಿ ನಡೆಯಿತು. ಮೊದಲನೇ ಅಧಿವೇಶನದಲ್ಲಿ ಓರಿಯೆಂಟೇಷನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಾಂಶುಪಾಲರಾದ ಡಾ. ರಮೇಶ್ ಆಚಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆಯನ್ನು ವಹಿಸಿ ಶುಭ ಹಾರೈಸಿದರು. ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ. ಹೇಮಾ ಎಸ್ ಕೊಡದ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಸಾಫ್ಟ್ ಸ್ಕಿಲ್ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಸಂಯೋಜಕರಾದ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ರಾಧಾಕೃಷ್ಣ ನಾಯಕ್ ಹಾಗೂ ನಂದಿನಿ ಸಿ., ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶೋಭಾ ಆರ್., ಗ್ರಂಥಪಾಲಕರಾದ ಹರೀಶ್ ಸಿ.ಕೆ., ಐಕ್ಯೂಎಸಿ ಸಂಯೋಜಕರಾದ ವಿದ್ಯಾ ಪಿ ಉಪಸ್ಥಿತರಿದ್ದರು.
ಎರಡನೇ ಅಧಿವೇಶನದಲ್ಲಿ ದಿ ಬೆಸ್ಟ್ ಟ್ಯಾಲೆಂಟ್ ಆಫ್ ಬಾರಕೂರು ಪಿಜಿ ಸ್ಟಡಿ ಸೆಂಟರ್ ಸ್ಪರ್ಧೆಯನ್ನು ಎಲ್ಲಾ ವಿಭಾಗದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯನ್ನು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಭವಿಷ್ಯದ ಉದ್ಯೋಗಕ್ಕೆ ಸಂಬಂಧಪಟ್ಟ ಸಂದರ್ಶನಕ್ಕೆ ತಯಾರಿ ನಡೆಸುವಲ್ಲಿ ಮಾರ್ಗದರ್ಶನ ಕೊಡುವ ಉದ್ದೇಶದಿಂದ ಆಯೋಜಿಸಲಾಗಿತ್ತು. ಕಾಲೇಜಿನ ಪ್ರಥಮ ವರ್ಷದ ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗ ವಿದ್ಯಾರ್ಥಿಗಳು ಉಪನ್ಯಾಸಕರ ಮಾರ್ಗದರ್ಶನದಲ್ಲಿ ಸ್ಪರ್ಧೆಯ ರೂಪುರೇಷೆಗಳನ್ನು ತಯಾರಿಸಿ ಸ್ಪರ್ಧೆಯು ಯಶಸ್ವಿಯಾಗುವಲ್ಲಿ ಮಹತ್ತರವಾದ ಪಾತ್ರ ವಹಿಸಿದರು. ಕಾಲೇಜಿನ ಸುಮಾರು 60 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮೊದಲನೇ ಸುತ್ತಿನಲ್ಲಿ ಗುಂಪು ಚರ್ಚೆ ಯನ್ನು ನಡೆಸಿ ಒಟ್ಟು 8 ವಿದ್ಯಾರ್ಥಿಗಳನ್ನು ಎರಡನೇ ಹಂತವಾದ ಒತ್ತಡ ಸಂದರ್ಶನಕ್ಕೆ ಆಯ್ಕೆ ಮಾಡಲಾಯಿತು. ನಂತರ 4 ವಿದ್ಯಾರ್ಥಿಗಳನ್ನು ಕೊನೆಯ ಹಂತವಾದ ಸುರ್ಪ್ರೈಸ್ ಇವೆಂಟ್ ಗೆ ಆಯ್ಕೆ ಮಾಡಿ ಅದರಲ್ಲಿ ಉತ್ತಮ ಪ್ರದರ್ಶನ ನೀಡಿದ ಮೊದಲನೇ ವರ್ಷದ ಎಂಕಾಮ್ ವಿದ್ಯಾರ್ಥಿನಿ ವೈಷ್ಣವಿ ಪಿ ಬೆಸ್ಟ್ ಟ್ಯಾಲೆಂಟ್ 2023-24 ಪ್ರಶಸ್ತಿಯನ್ನು ಹಾಗೂ ಪ್ರಥಮ ಬಹುಮಾನವಾಗಿ ನಗದು, ಪುಸ್ತಕ ಮತ್ತು ಕಾಲೇಜಿನ ಮೊಮೆಂಟೊ ತಮ್ಮದಾಗಿಸಿಕೊಂಡರು. ಎರಡನೇ ಬಹುಮಾನ ನಗದು ಹಾಗೂ ಪುಸ್ತಕವನ್ನು ದ್ವಿತೀಯ ವರ್ಷದ ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿನಿ ಲಾವಣ್ಯ ಪಡೆದುಕೊಂಡರು. ಅಜ್ಜರಕಾಡು ಸರ್ಕಾರಿ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಅಬ್ದುಲ್ ರಝಕ್ ಹಾಗೂ ಪುರುಷೋತ್ತಮ್ ಮತ್ತು ಎಸ್.ಎಂ.ಎಸ್. ಕಾಲೇಜು ಬ್ರಹ್ಮಾವರದ ವಾದಿರಾಜ್ ಪ್ರಭು ತೀರ್ಪುಗಾರರಾಗಿ ಸಹಕರಿಸಿದರು.