ಉಡುಪಿ, ಜ.8: ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಮಕ್ಕಳಿಗೆ ಪ್ರಜೆಗಳಾಗಿ ಬದುಕುವ ಹಕ್ಕುಗಳಿವೆ. ಮಕ್ಕಳ ಹಕ್ಕುಗಳು ಹಾಗೂ ಅವರ ರಕ್ಷಣೆಗಿರುವ ಕಾಯಿದೆಗಳ ಕುರಿತು ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಅತ್ಯವಶ್ಯಕವಾಗಿದೆ ಎಂದು ಜಿಲ್ಲಾ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿ ವಿಘ್ನೇಶ್ ಕುಮಾರ್ ಹೇಳಿದರು. ಅವರು ಸೋಮವಾರ ನಗರದ ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ, ಜನನ ಮರಣ ನೋಂದಾಣಾಧಿಕಾರಿಗಳಿಗೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಿಬ್ಬಂದಿಗಳಿಗೆ ಹಾಗೂ ಸರ್ಕಾರೇತರ ಮಕ್ಕಳ ಪಾಲನಾ ಸಂಸ್ಥೆಗಳ ಮುಖ್ಯಸ್ಥರುಗಳಿಗೆ ಬಾಲನ್ಯಾಯ ಕಾಯ್ದೆ 2015 ಮತ್ತು ತಿದ್ದುಪಡಿ 2021 ಹಾಗೂ ಮಕ್ಕಳಿಗೆ ಸಂಬಂಧಿಸಿದ ಕಾಯ್ದೆಗಳ ಕುರಿತು ನಡೆದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ನೆಲ್ಸನ್ ಮಂಡೇಲಾ ಅವರ ಮಾತಿನಂತೆ ಸಮಾಜವು ಮಕ್ಕಳನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದನ್ನು ತುಲನೆ ಮಾಡುವುದರ ಮೂಲಕ ಸಮಾಜದ ಮನಸ್ಥಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಉಡುಪಿ ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ಕಾಯಿದೆಗಳ ಉಲ್ಲಂಘನೆ ಹೆಚ್ಚಾಗಿ ಕಂಡುಬಂದಿರುವುದಿಲ್ಲ. ಮಕ್ಕಳ ರಕ್ಷಣೆ ಮಾಡುವುದು ಪುಣ್ಯದ ಕೆಲಸವಾಗಿದ್ದು, ತರಬೇತಿ ಕಾರ್ಯಾಗಾರದ ಮಾಹಿತಿ ಪಡೆದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಮಕ್ಕಳ ರಕ್ಷಣೆಗೆ ಮುಂದಾಗಬೇಕು ಎಂದರು.
ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಗೊತ್ತು, ಗೊತ್ತಿಲ್ಲದಂತೆ ಅನೇಕ ಸಂದರ್ಭಗಳಲ್ಲಿ ಮಕ್ಕಳಿಗಿರುವ ಹಕ್ಕುಗಳನ್ನು ಗಮನಿಸದೇ ಅವುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಸಂವಿಧಾನದ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರಕಾರವು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ವಿಶೇಷ ಉಪಬಂಧಗಳನ್ನು ರಚಿಸಿದೆ. ಕೇಂದ್ರ ಸರ್ಕಾರ ಮುಖ್ಯವಾಗಿ ಬಾಲನ್ಯಾಯ ಕಾಯಿದೆಯನ್ನು ಜಾರಿಗೆ ತಂದಿದ್ದು, ಇದರ ಒಂದು ಭಾಗವಾಗಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಮಕ್ಕಳ ಹಕ್ಕುಗಳ ನಿರ್ದೇಶನಾಲಯ ಕಾರ್ಯ ನಿರ್ವಹಿಸುತ್ತಿದೆ ಎಂದರು. ಮಕ್ಕಳ ರಕ್ಷಣೆಗೆ ಅನೇಕ ಕಾನೂನುಗಳಿದ್ದರೂ ಸಹ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಾಗುತ್ತಿದ್ದು, ಇದು ಕಾನೂನು ಬಾಹಿರವಾಗಿದೆ. ಮಕ್ಕಳ ಕಳ್ಳಸಾಗಾಣಿಕೆ, ಹೆಣ್ಣು ಮಕ್ಕಳ ಮಾರಾಟಗಳಿಗೆ ಕಡಿವಾಣ ಹಾಕಬೇಕಿದೆ ಎಂದ ಅವರು, ಮಕ್ಕಳ ವಿಷಯದಲ್ಲಿ ಸೂಕ್ಷö್ಮವಾಗಿ ವ್ಯವಹರಿಸಬೇಕು. ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ನಿಯೋಜಿತ ಅಧಿಕಾರಿಗಳು ಕಾರ್ಯಾಗಾರದ ಪ್ರಯೋಜನ ಪಡೆದು, ಕ್ರಿಯಾಶೀಲವಾಗಿ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು.
ಡಿಜಿಟಲ್ ವಾಲ್‌ಪೆಂಟಿಂಗ್ ಭಿತ್ತಿಚಿತ್ರವನ್ನು ಬಿಡುಗಡೆ ಮಾಡಲಾಯಿತು. ಬೆಂಗಳೂರು ಯುನಿಸೆಫ್ ಕನ್ಸಲ್ಟೆಂಟ್ ಸಿ.ದುಲ್ಸಿನ ಕ್ರಾಸ್ತಾ ಅವರು ಬಾಲ ನ್ಯಾಯ ಕಾಯಿದೆ ಮತ್ತು ಮಕ್ಕಳ ಸುರಕ್ಷತಾ ನೀತಿ ಕುರಿತು, ನ್ಯಾಯವಾದಿ ವಿಜಯ ವಾಸು ಪೂಜಾರಿ ಅವರು ಫೋಕ್ಸೋ ಕಾಯಿದೆ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ, ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ವಿಭಾಗದ ಉಪನ್ಯಾಸಕಿ ಡಾ.ಪ್ರಮೀಳಾ ವಾಜ್ ದತ್ತು ಅಧಿನಿಯಮ 2022 ಕುರಿತು ಹಾಗೂ ಮಣಿಪಾಲ ಪೊಲೀಸ್ ಠಾಣಾ ಉಪನಿರೀಕ್ಷಕ ದೇವರಾಜ್ ಟಿ.ವಿ ಅವರು ಸಾಮಾಜಿಕ ಜಾಲತಾಣ ಸೈಬರ್ ಅಪರಾಧ ತಡೆ ಕಾಯಿದೆಗಳ ಮಕ್ಕಳ ಮಾರಾಟ ಮತ್ತು ಸಾಗಾಟ ಕುರಿತು ಉಪನ್ಯಾಸ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಸನ್ನ ಹೆಚ್, ಎಎಸ್‌ಪಿ ಡಾ. ಕೆ.ಎಸ್ ಹೆಗ್ಡೆ, ಹಿರಿಯ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಎಸ್, ಜಿಲ್ಲಾ ಬಾಲನ್ಯಾಯ ಮಂಡಳಿ ಪ್ರಧಾನ ನ್ಯಾಯಾಧೀಶ ಸೋಮನಾಥ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೊನಾಲ್ಡ್ ಬಿ. ಪುರ್ಟಾಡೊ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲ ಸಿ.ಕೆ, ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರ್ ಎನ್ ಸ್ವಾಗತಿಸಿದರೆ, ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿ, ಕಪಿಲಾ ವಂದಿಸಿದರು.