ಉಡುಪಿ, ಜ.7: ಇತಿಹಾಸ ಪ್ರಸಿದ್ದ ವನದುರ್ಗೆ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮಂಡಲ ಪೂಜಾ ಮಹೋತ್ಸವವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ವೇದಮೂರ್ತಿ ಬಿ.ಕೆ.ವಿಘ್ನೇಶ್ ಭಟ್ ಅವರ ನೇತೃತ್ವದಲ್ಲಿ ಜರಗಿತು.
ಬೆಳಿಗ್ಗೆ ಪಂಚಾಮೃತಾಭಿಷೇಕ, ನವಕ ಕಲಶಾಭಿಷೇಕ ಅಲಂಕಾರ ಪೂಜೆ, ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಮಂಡಲ ಪೂಜೆ, ಉತ್ಸವ ಬಲಿ, ಪಲ್ಲ ಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು. ಮಧ್ಯಾಹ್ನ ಸುಬ್ರಹ್ಮಣ್ಯ ಬೈಪಾಡಿತ್ತಾಯ ಮತ್ತು ತಂಡದವರಿಂದ ಯಕ್ಷಗಾನ ತಾಳಮದ್ದಳೆ ‘ಮಾಯಾಮೃಗ’ ಹಾಗೂ ಸಂಜೆ ಕಾರ್ಕಳ ಯೋಗೀಶ್ ಕಿಣಿ ಬಳಗದವರಿಂದ ‘ಭಕ್ತಿ ಭಾವ ಸಂಗಮ’ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಿತು. ರಾತ್ರಿ ಪ್ರಸನ್ನ ಪೂಜೆ, ಉತ್ಸವ ಬಲಿ, ರಂಗಪೂಜೆ ಜರಗಿತು.