ಮಣಿಪಾಲ, ಜ.7: ಬಹು ನಿರೀಕ್ಷಿತ 3 ನೇ ಆವೃತ್ತಿಯ ಕಸ್ತೂರ್ಬಾ ಹಾಸ್ಪಿಟಲ್ ಕಾರ್ಪೊರೇಟ್ ಕ್ರಿಕೆಟ್ ಲೀಗ್ 2024 ಇದರ ಉದ್ಘಾಟನಾ ಸಮಾರಂಭ ಮಣಿಪಾಲದಲ್ಲಿ ನಡೆಯಿತು. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಆಯೋಜಿಸಿರುವ ಮೂರು ದಿನಗಳ ಕ್ರಿಕೆಟ್ ಸಂಭ್ರಮದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ ಕಾರ್ಪೊರೇಟ್ ಕಂಪನಿಗಳು, ಬ್ಯಾಂಕ್‌ಗಳು, ವೈದ್ಯಕೀಯ ಸಂಘಗಳು ಮತ್ತು ಮಾಧ್ಯಮ ಸಂಸ್ಥೆಗಳನ್ನು ಪ್ರತಿನಿಧಿಸುವ 24 ತಂಡಗಳು ಭಾಗವಹಿಸಲಿವೆ.
ಮಣಿಪಾಲ ಎಂಡ್ ಪಾಯಿಂಟ್ ಮೈದಾನದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಟೆನಿಸ್ ಬಾಲ್ ಅಸೋಸಿಯೇಶನ್‌ನ ಅಧ್ಯಕ್ಷ ಗೌತಮ್ ಶೆಟ್ಟಿ ಮತ್ತು ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ. ಎಚ್.ಎಸ್.ಬಲ್ಲಾಳ್ ಜಂಟಿಯಾಗಿ ಪ್ರತಿಷ್ಠಿತ ಟ್ರೋಫಿಯನ್ನು ಅನಾವರಣಗೊಳಿಸುವುದರ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗೌತಮ್ ಶೆಟ್ಟಿ, ವೃತ್ತಿಪರರ ನಡುವೆ ಸೌಹಾರ್ದತೆ ಮತ್ತು ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸುವಲ್ಲಿ ಇಂತಹ ಕ್ರೀಡಾಕೂಟಗಳ ಮಹತ್ವವನ್ನು ಎತ್ತಿ ತೋರಿಸಿದರು. ಡಾ. ಎಚ್ ಎಸ್ ಬಲ್ಲಾಳ್ ಅವರು ತಮ್ಮ ಭಾಷಣದಲ್ಲಿ, ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಮಾಹೆ ಮಣಿಪಾಲದ ಅಚಲ ಬೆಂಬಲವನ್ನು ಒತ್ತಿ ಹೇಳಿದರು. ಸಂಸ್ಥೆಯೊಳಗೆ ಸಮಗ್ರ ಅಭಿವೃದ್ಧಿ ವಾತಾವರಣವನ್ನು ಬೆಳೆಸುವ ಬದ್ಧತೆಯ ಭಾಗವಾಗಿ ಕಾರ್ಪೊರೇಟ್ ಕ್ರಿಕೆಟ್ ಲೀಗ್ ಅನ್ನು ಆಯೋಜಿಸಿದ್ದಕ್ಕಾಗಿ ಕಸ್ತೂರ್ಬಾ ಆಸ್ಪತ್ರೆಯನ್ನು ಅವರು ಶ್ಲಾಘಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾಹೆ ಮಣಿಪಾಲದ ಸಹ ಕುಲಪತಿಗಳಾದ ಡಾ.ಶರತ್ ಕುಮಾರ್ ರಾವ್, ಕುಲಸಚಿವ ಡಾ. ಗಿರಿಧರ್ ಕಿಣಿ, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ ಡೀನ್ ಡಾ. ಜಿ ಅರುಣ್ ಮೈಯ್ಯ, ಮಾರುಕಟ್ಟೆ ಮುಖ್ಯಸ್ಥ ಸಚಿನ್ ಕಾರಂತ್, ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ ಬಲ್ಲಾಳ, ಮೋಹನ್ ಶೆಟ್ಟಿ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಕ್ರಿಕೆಟ್ ಪಂದ್ಯಾವಳಿಯು ಜನವರಿ 9 ರವರೆಗೆ ನಡೆಯಲಿದೆ. ಜನವರಿ 9 ರಂದು ಸಂಜೆ 3:45 ಕ್ಕೆ ಸಮಾರೂಪ ಸಮಾರಂಭ ನಡೆಯಲಿದೆ.