ಬೆಂಗಳೂರು, ಜ.6: ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಅಧ್ಯಕ್ಷತೆಯಲ್ಲಿ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ.ಸುಧಾಕರ್ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣನವರ ನೇತೃತ್ವದ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ನಿಯೋಗದ ಜತೆ ಶನಿವಾರ ಸಭೆ ನಡೆಯಿತು. ಈ ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು ವೇತನ ಹೆಚ್ಚಳ ಮಾಡಲಾಗಿದೆ.
ಪ್ರಮುಖ ನಿರ್ಣಯಗಳು: ಸೇವಾನುಭವದ ಆಧಾರದಲ್ಲಿ ಅತಿಥಿ ಉಪನ್ಯಾಸಕರ 5,000 ರೂ. ಗಳಿಂದ 8000 ರೂ. ಗಳಷ್ಟು ಗೌರವಧನ ಹೆಚ್ಚಳ ಮಾಡುವ ಜೊತೆಗೆ ಕೆಲವು ಹೊಸ ಸೌಲಭ್ಯಗಳನ್ನು ನೀಡಲಾಗುವುದು. ಈ ಹಿಂದೆ ಮಾಸಿಕ 32,000 (ಯುಜಿಸಿ ಅರ್ಹತೆಯನ್ನು ಹೊಂದಿರುವ ನೆಟ್/ಕೆ.ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಜತೆಗೆ 5 ವರ್ಷಕ್ಕಿಂತ ಹೆಚ್ಚು ಅನುಭವ ಹೊಂದಿದ) ಮಾಸಿಕ ವೇತನ ಪಡೆಯುತ್ತಿದ್ದ ಉಪನ್ಯಾಸಕರು ಸೇವಾನುಭವದ ಅನುಗುಣವಾಗಿ ಇನ್ನು ಮುಂದೆ ರೂ. 40,000 ಪಡೆಯಲಿದ್ದಾರೆ. ಅದೇ ರೀತಿ ಮಾಸಿಕ 30,000 (ಯುಜಿಸಿ ಅರ್ಹತೆಯನ್ನು ಹೊಂದಿರುವ ನೆಟ್/ಕೆ.ಸೆಟ್) ಮತ್ತು ಐದು ವರ್ಷಕ್ಕಿಂತ ಕಡಿಮೆ ಅನುಭವ ಹೊಂದಿದವರ ಮಾಸಿಕ ವೇತನದಲ್ಲಿ ರೂ. 5 ಸಾವಿರ ಹೆಚ್ಚಳ, ಈ ಹಿಂದೆ ರೂ. ಮಾಸಿಕ ರೂ. 28,000 ಪಡೆಯುತ್ತಿದ್ದ (ನೆಟ್/ಕೆ.ಸೆಟ್ ಆಗದ, 5 ವರ್ಷಕ್ಕಿಂತ ಹೆಚ್ಚು ಸೇವಾನುಭವ ಹೊಂದಿದ) ಉಪನ್ಯಾಸಕರಿಗೆ 5 ರಿಂದ 10 ವರ್ಷದ ಸೇವಾನುಭವ ಹೊಂದಿದವರಿಗೆ 6 ಸಾವಿರ ರೂ. ಹೆಚ್ಚಳ, 10 ರಿಂದ 15 ವರ್ಷದ ಸೇವಾನುಭವ ಹೊಂದಿದವರಿಗೆ 7 ಸಾವಿರ ರೂ. ಹಾಗೂ 15 ವರ್ಷಕ್ಕಿಂತ ಹೆಚ್ಚಿನ ಸೇವಾನುಭವ ಹೊಂದಿದವರಿಗೆ 8 ಸಾವಿರ ರೂ. ಗಳಷ್ಟು ಹೆಚ್ಚಳ ಮಾಡಲಾಗಿದೆ. ಈ ಹಿಂದೆ ರೂ. 26,000 ಪಡೆಯುತ್ತಿದ್ದವರಿಗೆ (ನೆಟ್/ಕೆ.ಸೆಟ್ ಆಗದ 5 ವರ್ಷಕ್ಕಿಂತ ಕಡಿಮೆ ಸೇವಾನುಭವ ಹೊಂದಿದ) ಉಪನ್ಯಾಸಕರಿಗೆ ರೂ. 5 ಸಾವಿರ ಹೆಚ್ಚಳ ಮಾಡಲಾಗಿದೆ.
ವಾರ್ಷಿಕ 5 ಲಕ್ಷ ರೂ. ಗಳ ಆರೋಗ್ಯ ವಿಮಾ ಸೌಲಭ್ಯ ಅನುಷ್ಠಾನ, ಸೇವೆ ಸಲ್ಲಿಸಿ 60 ವರ್ಷ ಮೀರಿದ ನಂತರದಲ್ಲಿ ಭದ್ರತಾ ರೂಪದಲ್ಲಿ ಗರಿಷ್ಠ 5 ಲಕ್ಷ ರೂ. ಇಡಿಗಂಟು ನೀಡುವುದು, ವಾರಕ್ಕೆ 15 ಗಂಟೆಗೂ ಹೆಚ್ಚಿನ ಕಾರ್ಯಭಾರ ಹೊಂದಿರುವ ಉಪನ್ಯಾಸಕರಿಗೆ ಮಾಸಿಕ 1 ದಿನ ವೇತನ ಸಹಿತ ರಜೆ ನೀಡುವುದು ಹಾಗೂ 3 ತಿಂಗಳ ವೇತನ ಸಹಿತ ಮಾತೃತ್ವ ರಜೆ ನೀಡಲಾಗುವುದು. ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರ ಸೇವಾನುಭವ ಆಧರಿಸಿ, ವೆಯ್ಟೇಜ್ ನೀಡುವುದು, ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದ ಸ್ಥಳದಲ್ಲಿಯೇ ಕಾರ್ಯಭಾರವಿದ್ದಲ್ಲಿ ನಂತರದ ವರ್ಷವೂ ಅಲ್ಲಿಯೇ ಅವರ ಸೇವೆಯನ್ನು ಮುಂದುವರೆಸುವುದು ಸೇರಿದಂತೆ ಕೌನ್ಸೆಲಿಂಗ್ ಪ್ರಕ್ರಿಯೆ ಸರಳೀಕರಣಗೊಳಿಸಲು ಸರ್ಕಾರ ನಿರ್ಧರಿಸಿದೆ.