ಈ ಕೃತಿಯ ಒಟ್ಟಾರೆ ಹೂರಣ ನೇೂಡಿದರೆ ಇದನ್ನು ಅಷ್ಟು ಸುಲಭವಾಗಿ ಬರೆಯುವ ಕೃತಿ ಖಂಡಿತವಾಗಿಯೂ ಅಲ್ಲ. ಸುಮಾರು 150 ವರುಷಗಳ ಬರಹಗಾರರ ದಾಖಲೆಯನ್ನು ಸಂಗ್ರಹಿಸುವುದರ ಜೊತೆಗೆ ಉಡುಪಿ ಜಿಲ್ಲೆಯ ಮೂಲೆ ಮೂಲೆಯನ್ನು ಸುತ್ತಾಡಿ ಸಾವಿರಾರು ಮಂದಿಯನ್ನು ಸಂಪರ್ಪ ಮಾಡಿ ಸರಿ ಸುಮಾರು ಐದು ವರುಷಗಳ ಪರಿಶ್ರಮದಿಂದ ರಚಿಸಿದ 900 ಪುಟಗಳಿಗೂ ಮೀರಿದ ಮಾಹಾ ಕೃತಿ ಅನ್ನುವುದರಲ್ಲಿ ಎರಡು ಮಾತಿಲ್ಲ.
ಮುದ್ದಣನ ಕಾಲದಿಂದ ಹಿಡಿದು 2020 ರತನಕದ ಹಿರಿಯ ಕಿರಿಯ ಬರಹಗಾರರ ಪರಿಚಯಾತ್ಮಕ ಮಾಹಿತಿ ಹೊತ್ತು ತಂದಿರುವ ಈ ಹೊತ್ತಿಗೆ ಒಂದಾಥ೯ದಲ್ಲಿ ಸಾಹಸಪೂರ್ಣ ಕೃತಿ ಎಂದೇ ಕರೆಯಬೇಕು.
ಕೃತಿಕಾರರ ಪರಿಚಯ: ಈ ಮಹಾನ್ ಗ್ರಂಥದ ಕೃತಿಕಾರ ಡಾ. ಅನಿಲ್ ಕುಮಾರ್ ಶೆಟ್ಟಿ. ಇವರು ನನ್ನ ಆತ್ಮೀಯ ಒಡನಾಡಿ ಸ್ನೇಹಿತರು ಹೌದು. ಇದಕ್ಕಿಂತ ಮಿಗಿಲಾಗಿ ಇವರ ತಂದೆ ದಿ.ಬಿ.ಕುಶಲಶೆಟ್ಟಿಯವರು ನನ್ನ ಸಂಪ್ರೀತಿಯ ಗೌರವದ ಗುರುಗಳು ಅನ್ನುವುದು ನನಗೂ ಅಭಿಮಾನ. ನನ್ನ ಬರವಣಿಗೆ ಸಾಹಿತ್ಯದ ಮೇಲೆ ಚಿಕ್ಕ ಪ್ರಾಯದಲ್ಲಿಯೇ ಆಗಾಧ ಪ್ರಭಾವ ಬೀರಿದ ಕನ್ನಡ ಮತ್ತು ವಿಜ್ಞಾನದ ಮೇಷ್ಟ್ರು ಅನಿಲ್ ಶೆಟ್ಟಿಯವರಿಗೆ ಎಂಜಿಎಂ ಶಿಕ್ಷಣ ಸಂಸ್ಥೆಯ ಜೊತೆ ಅವಿನಾಭಾವ ಸಂಬಂಧವಿದೆ. ಡಾ.ಶೆಟ್ಟಿಯವರ ಅಧ್ಯಾಪನ ವೃತ್ತಿಗೆ ಸ್ಪೂರ್ತಿ ನೀಡಿ ಬೆಂಬಲಿಸಿದ ಸಂಸ್ಥೆ ಎಂಜಿಎಂ ಕಾಲೇಜು. ಅನಂತರದಲ್ಲಿ ಸರಕಾರಿ ಕಾಲೇಜಿನಲ್ಲಿ ಅವರ ಸೇವೆ ನಿಯುಕ್ತಿಗೊಂಡಿತು. ಹಾಗಾಗಿ ಅವರಿಗೆ ಅಪಾರವಾದ ಶಿಷ್ಯರ ಅಭಿಮಾನಿಗಳು ಬರೇ ಸರಕಾರಿ ಕಾಲೇಜುಗಳಲ್ಲಿ ಮಾತ್ರವಲ್ಲ ಎಂಜಿಎಂ ಸಂಸ್ಥೆಯಲ್ಲೂ ಇದ್ದಾರೆ ಅನ್ನುವುದು ಅವರ ಗುರು ಶಿಷ್ಯ ಸಂಬಂಧದ ಇನ್ನೊಂದು ಶಕ್ತಿಯೂ ಹೌದು. ಜನವರಿ 7ರಂದು ಡಾ. ಅನಿಲ್ ಕುಮಾರ್ ಅವರ ಮಹಾನ್ ಕೃತಿ ಲೇೂಕಾರ್ಪಣೆಗೊಳ್ಳುತ್ತಿರುವುದು ಉಡುಪಿ ಜಿಲ್ಲಾ ಸಾಹಿತ್ಯ ಸಾಂಸ್ಕೃತಿಕ ಇತಿಹಾಸದಲ್ಲೇ ಒಂದು ಅಪೂರ್ವ ಸಂದರ್ಭ, ಮಾತ್ರವಲ್ಲದೇ ಸಾಹಿತ್ಯ ಸಂಶೇೂಧಕರಿಗೆ ಆಕಾರ ಕೃತಿಯಾಗಿಯೂ ನಿಲ್ಲಬಲ್ಲ ಅಪರೂಪದ ಮಾಹಿತಿ ಹೂರಣ ಗ್ರಂಥವೂ ಹೌದು. ಕೃತಿ ಲೇೂಕಾರ್ಪಣಾ ಕಾರ್ಯಕ್ರಮಕ್ಕೆ ನಾನು ಸಾಕ್ಷಿಯಾಗುತ್ತಿದ್ದೇನೆ. ನೀವೂ ಬನ್ನಿ.
-ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ