ಉಡುಪಿ, ಜ.3: ಪೊಡವಿಗೊಡೆಯ ಅನ್ನಬ್ರಹ್ಮ ಶ್ರೀಕೃಷ್ಣ ಮತ್ತು ಶ್ರೀ ಮುಖ್ಯಪ್ರಾಣ ದೇವರ ಪೂಜಾ ದ್ವೈವಾರ್ಷಿಕ ಪರ್ಯಾಯದ 502 ನೇ ವರ್ಷದ ಶುಭಸಂದರ್ಭದಲ್ಲಿ ಶ್ರೀ ಪುತ್ತಿಗೆ ಉಪೇಂದ್ರತೀರ್ಥ ಸಂಸ್ಥಾನದ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಶಿಷ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದಂಗಳವರೊಡಗೂಡಿ ಶ್ರೀ ಮಧ್ವ ವಾದಿರಾಜರ ಸತ್ಸಂಪ್ರದಾಯದಂತೆ ಚತುರ್ಥ ಬಾರಿಗೆ ಜನವರಿ 18 ರ ಬೆಳಿಗ್ಗೆ ಸರ್ವಜ್ಞಪೀಠಾರೋಹಣ ಮಾಡಲಿದ್ದಾರೆ. ಆ ಪ್ರಯುಕ್ತ ಸ್ವಾಮೀಜಿಯವರು ಪರ್ಯಾಯ ಪೂರ್ವಭಾವಿಯಾಗಿ ದೇಶ-ವಿದೇಶಗಳಲ್ಲಿ ಸಂಚರಿಸಿ, ಪ್ರಸಿದ್ಧ 48 ತೀರ್ಥಕ್ಷೇತ್ರಗಳ ಮಂಡಲಯಾತ್ರೆ ಪೂರೈಸಿ ಜನವರಿ 8 ಸೋಮವಾರ ಉಡುಪಿಗೆ ಪುರಪ್ರವೇಶಗೈಯಲಿದ್ದಾರೆ.
ಸಾಂಪ್ರದಾಯಿಕ ಮೆರವಣಿಗೆ: ಜನವರಿ 8 ರಂದು ಅಪರಾಹ್ನ 3.30 ಗಂಟೆಗೆ ಜೋಡುಕಟ್ಟೆಯಿಂದ ಸಾಂಪ್ರದಾಯಿಕ ಮೆರವಣಿಗೆಯ ಮೂಲಕ ಶ್ರೀಮಠದ ಸಕಲ ಗೌರವಗಳೊಂದಿಗೆ ಶ್ರೀಪಾದರನ್ನು ಬರಮಾಡಿಕೊಳ್ಳಲಾಗುವುದು. ಪುರಪ್ರವೇಶ ಮೆರವಣಿಗೆಯು ಜೋಡುಕಟ್ಟೆ-ಕೆ.ಎಂ. ಮಾರ್ಗ-ತ್ರಿವೇಣಿ ವೃತ್ತ-ಸಂಸ್ಕೃತ ಕಾಲೇಜು ರಸ್ತೆ-ರಥಬೀದಿಯಾಗಿ ಸಾಗಿಬರಲಿದೆ. ಬಳಿಕ ಉಭಯ ಶ್ರೀಗಳು ಶ್ರೀ ಚಂದ್ರಮೌಳೀಶ್ವರ, ಶ್ರೀ ಅನಂತೇಶ್ವರ, ಶ್ರೀ ಕೃಷ್ಣ ಮುಖ್ಯಪ್ರಾಣರ ದರ್ಶನ ಪಡೆಯಲಿದ್ದಾರೆ. ಬಳಿಕ ಶ್ರೀಮಠವನ್ನು ಪ್ರವೇಶಿಸಲಿರುವ ಉಭಯ ಶ್ರೀಗಳು ರಥಬೀದಿಯ ‘ಆನಂದತೀರ್ಥ’ ವೇದಿಕೆಯಲ್ಲಿ ಸಂಜೆ 7 ಗಂಟೆಗೆ ಪೌರಸಮ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.