ಮಲ್ಪೆ, ಜ. 3: ಯಾವುದೇ ರಂಗದಲ್ಲಿ ನಾವೇನಾದರು ಸಾಧನೆ ಮಾಡಬೇಕಾದರೆ ನಾವು ಮೊದಲು ಮಾಡಬೇಕಾದದ್ದು ಸ್ಪಷ್ಟ ಪ್ರಾಮಾಣಿಕ ನಿರ್ಧಾರ. ಈ ನಿರ್ಧಾರಗಳೇ ನಮ್ಮ ಬದುಕಿನ ಕನಸಾಗಿ ಪರಿವರ್ತನೆಗೊಳ್ಳುತ್ತದೆ. ಇದನ್ನು ಸಾಧಿಸಿ ತೋರಿಸಬೇಕಾದರೆ ಈ ದಿಕ್ಕಿನಲ್ಲಿ ನಿರಂತರ ಪ್ರಯತ್ನವೂ ಅಷ್ಟೇ ಅಗತ್ಯ. ಪ್ರಯತ್ನದ ದಾರಿಯಲ್ಲಿ ಸೋಲು ನೇೂವುಗಳು ಬರುವುದು ಸಹಜ.ಇದನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆದಾಗ ಯಶಸ್ಸು ನಮ್ಮದಾಗುತ್ತದೆ ಎಂದು ಜಮ್ಮು ಕಾಶ್ಮೀರ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಿರಿಯಡಕ ರಾಜೇಶ್ ಪ್ರಸಾದ್ ಅಭಿಪ್ರಾಯಪಟ್ಟರು. ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಐ.ಕ್ಯೂ.ಎ.ಸಿ ಮತ್ತು ಉದ್ಯೋಗ ಮಾಹಿತಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವೃತ್ತಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಲ್ಲಿ ನಾವು ಗಳಿಸುವ ಪದವಿಯ ಅಂಕಗಳೊಂದೆ ಮಾನದಂಡವಾಗುವುದಿಲ್ಲ. ದಿನನಿತ್ಯದ ಪ್ರಾಪಂಚಿಕ ಜ್ಞಾನವೂ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ದಿನನಿತ್ಯವೂ ಪತ್ರಿಕೆಗಳನ್ನು ಓದಿ ಮಾಹಿತಿ ಸಂಗ್ರಹಿಸಿ ವಿಶ್ಲೇಷಣೆ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ. ಮೊದಲಿಗೆ ಚಿಕ್ಕ ಪುಟ್ಟ ಉದ್ಯೋಗ ಸಿಕ್ಕಿದರೂ ಸ್ವೀಕರಿಸಿ ಅನಂತರದಲ್ಲಿ ದೊಡ್ಡ ಕನಸುಗಳನ್ನು ಸಾಧಿಸಲು ಪ್ರಯತ್ನಶೀಲರಾಗಬೇಕು. ಹಾಗಾಗಿ ಯಶಸ್ಸಿಗೆ ಯಾವುದೇ ಅಡ್ಡ ದಾರಿ ಇಲ್ಲ. ನಿರಂತರ ಪ್ರಯತ್ನ ಒಂದೇ ಯಶಸ್ಸಿನ ದಾರಿ ಅನ್ನುವುದು ನಮ್ಮ ಬದುಕಿನ ನಿತ್ಯದ ಪಾಠವಾಗಬೇಕು. ನಮ್ಮ ಸೇವೆಯಲ್ಲಿ ಪ್ರಾಮಾಣಿಕತೆಯ ಜೊತೆಗೆ ಬಡಜನರ ಬದುಕಿನ ಬಗ್ಗೆ ಕಾಳಜಿ ವಹಿಸಿ ಸೇವೆಯನ್ನು ನೀಡುವ ಮನಸ್ಥಿತಿ ನಾವು ಬೆಳೆಸಿಕೊಳ್ಳಬೇಕು. ಇದುವೆ ನಿಜವಾದ ದೇಶ ಸೇವೆ ಎಂದು ಹಿರಿಯ ಐ.ಎ.ಎಸ್ ಅಧಿಕಾರಿ ರಾಜೇಶ್ ಪ್ರಸಾದ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವಿತ್ತರು.
ಸಭಾಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಸುರೇಶ್ ರೆೃ.ಕೆ. ವಹಿಸಿದ್ದರು. ಎಂ.ಜಿ.ಎಂ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಐ.ಕ್ಯೂ.ಎ.ಸಿ.ಸಂಯೋಜಕಿ ಡಾ. ಮೇವಿ ಮಿರಾಂಡಾ, ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರಾಘವ ನಾಯ್ಕ್, ಸಹ ಪ್ರಾಧ್ಯಾಪಕ ಉಮೇಶ್ ಪೈ, ಉಪಸ್ಥಿತರಿದ್ದರು. ವಿದ್ಯಾರ್ಥಿ ಜಯಂತ್ ಸ್ವಾಗತಿಸಿ, ಸಂಧ್ಯಾ ಅಡಿಗ ವಂದಿಸಿದರು. ತ್ರಿವೇಣಿ ಕಾರ್ಯಕ್ರಮ ನಿರೂಪಿಸಿದರು.