ಕಟಪಾಡಿ, ಜ.2: ಪಾಜಕ ಆನಂದತೀರ್ಥ ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವದ ಪ್ರಯುಕ್ತ ಆನಂದತೀರ್ಥ ಪ.ಪೂ ಕಾಲೇಜು ವಿದ್ಯಾರ್ಥಿಗಳಿಂದ ವಸ್ತು ಪ್ರದರ್ಶನ ಆನಂದತೀರ್ಥ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಪೇಜಾವರ ಮಠಾಧೀಶ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ವಸ್ತು ಪ್ರದರ್ಶನ ಉದ್ಘಾಟಿಸಿ, ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ಹಾಗೂ ಆರ್ಥಿಕತೆಗೆ ಸಂಬಂಧಿಸಿದ ವಿವಿಧ ಮಾದರಿಗಳನ್ನು ಕಂಡು ಸಂತೋಷ ಪಟ್ಟು, ವಿದ್ಯಾರ್ಥಿಗಳ ಮನೋವಿಕಾಸಕ್ಕೆ ತಕ್ಕಂತೆ ತಯಾರಿಸಿದ ವಸ್ತುಗಳ ಮಾದರಿಯು ಸಾಮಾನ್ಯರಿಗೂ ತಿಳುವಳಿಕೆ ಸಿಗುವಂತೆ ವಿನ್ಯಾಸಗೊಳಿಸಿದ್ದೀರಿ, ವಿಜ್ಞಾನ ಮುಂದುವರೆದಂತೆ ಅದರ ಪ್ರಯೋಜನಗಳು ಜನಸಾಮಾನ್ಯರಿಗೆ ತಿಳಿಯುವಂತೆ ಮಾಡುವುದು ವಿದ್ಯಾವಂತರ ಕೆಲಸ. ವಿಜ್ಞಾನ ಹಾಗೂ
ಆರ್ಥಿಕತೆ ದೇಶದ ಅವಿಭಾಜ್ಯ ಅಂಗ ಅದನ್ನು ಇಲ್ಲಿ ಪ್ರದರ್ಶಿಸಿ ಜನಸಾಮಾನ್ಯರಿಗೆ ತಿಳಿಸುವಂತ ಕಾರ್ಯ ಮಾಡುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದು ಶುಭ ಹಾರೈಸಿದರು.
ಚಂದ್ರಯಾನದಂತಹ ಕಠಿಣ ಮಾದರಿಯಿಂದ ಹಿಡಿದು, ಮನುಷ್ಯನ ದೇಹ ರಚನೆಯವರೆಗಿನ ಮಾದರಿಗಳು ಹಾಗೂ ದೇಶದ ಆರ್ಥಿಕತೆಯಲ್ಲಿ ವಿವಿಧ ವಲಯಗಳ ಪಾತ್ರದ ಬಗ್ಗೆಯ ಮಾದರಿ ಪ್ರದರ್ಶನಗಳು ನೋಡುಗರಿಗೆ ಹಲವಾರು ಉಪಯುಕ್ತ ಮಾಹಿತಿಯನ್ನು ನೀಡಿದವು. ಶಿಕ್ಷಣ ತಜ್ಞ ಮಹಾಬಲೇಶ್ವರ ರಾವ್, ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ನಾಗರಾಜ್ ಬಲ್ಲಾಳ್, ಸದಸ್ಯ ಸುದರ್ಶನ್ ರಾವ್, ಪ್ರಾಂಶುಪಾಲ ವಿಜಯ್ ಪಿ. ರಾವ್, ವಸ್ತು ಪ್ರದರ್ಶನದ ಮಾರ್ಗದರ್ಶಕ, ಸಂಸ್ಕೃತ ಉಪನ್ಯಾಸಕ ವೀರೇಂದ್ರ ಹೆಗ್ಡೆ, ದೈ.ಶಿ.ಶಿಕ್ಷಕ ವಕ್ಷತ್ ಸಾಲಿಯಾನ್, ಮುಂತಾದವರು ಉಪಸ್ಥಿತರಿದ್ದರು.