ಕೋಟ, ಜ.1: ದ್ರಾವಿಡ ಬ್ರಾಹ್ಮಣ ಪರಿಷತ್ ಕುಂಭಾಶಿ ವಲಯದ ವಾರ್ಷಿಕ ಅಧಿವೇಶನ ಕಾರ್ಯಕ್ರಮ ಕುಂಭಾಶಿಯ ಆನೆಗುಡ್ಡೆ ಶ್ರೀ ವಿನಾಯಕ ಸಭಾಗೃಹದಲ್ಲಿ ಭಾನುವಾರ ನಡೆಯಿತು. ಶ್ರೀ ವಿನಾಯಕ ಸಭಾಗೃಹ ಮಾಲಕರಾದ ರವಿರಾಜ್ ಉಪಾಧ್ಯಾ ಮಾತನಾಡಿ, ಬ್ರಾಹ್ಮಣರ ಸಂಖ್ಯೆ ಇಳಿಮುಖವಾಗಲು ಕಾರಣ ನಾವಿಬ್ಬರು ನಮಗೊಬ್ಬರು ಎಂಬ ಧೋರಣೆ ನಮ್ಮಲ್ಲಿ ಸೃಷ್ಠಿಯಾಗಿದೆ. ಎಲ್ಲರೂ ಪಲ್ಲಕ್ಕಿ ಏರಿದರೆ ಹೊರುವವರ್ಯಾರು ಎಂಬ ಪ್ರಶ್ನೆ ಉದ್ಬವಿಸಿದೆ. ಈ ದಿಸೆಯಲ್ಲಿ ಪಲ್ಲಕ್ಕಿಯನ್ನು ಏರುವ ಮೊದಲು ಹೊರುವವರಾಗೋಣ. ಏರಿದವರಿಗೆ ಹೆಗಲಾಗೋಣ ಎಂಬ ಕಿವಿಮಾತನ್ನ ಸಮುದಾಯಕ್ಕೆ ತಿಳಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉದ್ಯಮಿ ಅನಂತಕೃಷ್ಣ ಉಪಾಧ್ಯಾ, ಬ್ರಾಹ್ಮಣರು ನಾವೆಲ್ಲಾ ಒಗ್ಗಟ್ಟಾಗಿ ಒಬ್ಬರಿಗೊಬ್ಬರು ಸಹಾಯ ಮಾಡುವ ಮನಸ್ಥಿತಿ ಸೃಷ್ಠಿಸಿಕೊಳ್ಳಬೇಕು. ಈ ಮೂಲಕ ಎಲ್ಲರಿಗೂ ಮಾದರಿಯಾಗೋಣ. ಹಳೆ ಬೇರುಗಳ ಆಶ್ರಯದಲ್ಲಿ ಹೊಸ ಚಿಗುರುಗಳು ಮೊಳೆಯಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು. ಕುಂದಾಪುರ ತಾಲೂಕಿನ ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಶುಭಚಂದ್ರ ಹತ್ವಾರ, ತಾಲೂಕಿನ ಪ್ರಧಾನ ಕಾರ್ಯದರ್ಶಿ ರತ್ನಾಕರ ಉಡುಪ, ತಾಲೂಕಿನ ಮಹಿಳಾ ವೇದಿಕೆಯ ಅಧ್ಯಕ್ಷೆ ಸಂಧ್ಯಾ ಉಡುಪ, ತಾಲೂಕಿನ ಯುವ ವಿಪ್ರ ವೇದಿಕೆಯ ಅಧ್ಯಕ್ಷ ಅವನೀಶ ಹೊಳ್ಳ, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಕಾರ್ಯದರ್ಶಿ ಗಣೇಶ್ ರಾವ್, ಕುಂಭಾಶಿ ವಲಯದ ಮಹಿಳಾ ಅಧ್ಯಕ್ಷೆ ಸುಪ್ರೀತಾ ಪುರಾಣಿಕ್ ಉಪಸ್ಥಿತರಿದ್ದರು.
ವಲಯದ ನಿವೃತ್ತ ಯೋಧ ವಿಶ್ವನಾಥ ಹಂದೆಯವರನ್ನು ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ದ್ರಾವಿಡ ಬ್ರಾಹ್ಮಣ ಪರಿಷತ್ ಕುಂಭಾಶಿ ವಲಯದ ಅಧ್ಯಕ್ಷ ರಮೇಶ್ ಚಾತ್ರ ವಹಿಸಿದ್ದರು. ಕುಂಭಾಶಿ ವಲಯದ ಯುವ ವಿಪ್ರ ವೇದಿಕೆಯ ನೂತನ ಅಧ್ಯಕ್ಷರಾಗಿ ವಾದಿರಾಜ್ ಉಪಾಧ್ಯ ತೆಕ್ಕಟ್ಟೆ, ಕಾರ್ಯದರ್ಶಿಯಾಗಿ ಅಕ್ಷಯ ಹೆಬ್ಬಾರ್ ಕುಂಭಾಶಿ ಆಯ್ಕೆಯಾದರು. ೨೦೨೨/೨೩ನೇ ಸಾಲಿನ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ರಾಘವೇಂದ್ರ ಪುರಾಣಿಕ್ ವಾಚಿಸಿದರು. ಲೆಕ್ಕಪತ್ರವನ್ನು ಕೋಶಾಧಿಕಾರಿ ಪದ್ಮನಾಭ ಅಡಿಗ ಮಂಡಿಸಿದರು. ಪುರುಷ ಹಾಗೂ ಮಹಿಳೆ, ಪುಟಾಣಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಅನರ್ಘ್ಯ, ಮೇಧಾ, ಮಾನ್ಯ ಪ್ರಾರ್ಥಿಸಿದರು, ಪರಿಷತ್ ಸದಸ್ಯ ರಾಮಚಂದ್ರ ಹಂದೆ ಸ್ವಾಗತಿಸಿದರು. ಪರಿಷತ್ತಿಗೆ ಸೇರಿದ ಹೊಸ ಸದಸ್ಯರಿಗೆ ಪುಷ್ಪ ನೀಡಿ ಸ್ವಾಗತಿಸಲಾಯಿತು. ಸದಸ್ಯರಾದ ಶೇಷಾದ್ರಿ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು. ವಲಯದ ಜತೆ ಕಾರ್ಯದರ್ಶಿ ವಿಷ್ಣುಮೂರ್ತಿ ಹತ್ವಾರ ವಂದಿಸಿದರು.