ಕೋಟ, ಡಿ.29: ಇತಿಹಾಸದಲ್ಲೆ ಮೊದಲೆಂಬಂತೆ ಕೂಟ ಮಹಾಜಗತ್ತಿನ ಕೋಟ ಪರಿಸರದ ಮಹಾಲಿಂಗೇಶ್ವರನ ಸಾನಿಧ್ಯದಲ್ಲಿ ಲೋಕಕಲ್ಯಾಣಾರ್ಥವಾಗಿ ಕೋಟಿ ಗಾಯತ್ರೀ ಮಹಾಯಾಗ, ಲಕ್ಷ ಲಲಿತಾ ಸಹಸ್ರನಾಮ ಮಹಾಯಾಗ ಕಾರ್ಯಕ್ರಮ ನಡೆಯಿತು. ಶ್ರೀ ಶಾಂತಿಮತೀ ಪ್ರತಿಷ್ಠಾನ ಹಂದಾಡಿ ಬ್ರಹ್ಮಾವರ ಇವರ ಆಶ್ರಯದಲ್ಲಿ ಮಹಾಯಾಗ ಸಮಿತಿಯ ಮೇಲುಸ್ತುವಾರಿಯಲ್ಲಿ ನವ ಕುಂಡಗಳಲ್ಲಿ ೧೫೦ ಋತ್ವಿಜರ ಸಮ್ಮುಖದಲ್ಲಿ ಮಹಾಯಾಗ ಮೊದಲ್ಗೊಂಡಿತು. ವೇದಬ್ರಹ್ಮ ಹೃಷಿಕೇಶ್ ಬಾಯರಿ ಬಾರ್ಕೂರು, ಅವಧಾನಿ ಸುಬ್ರಹ್ಮಣ್ಯ ಭಟ್ ಗುಂಡಿಬೈಲ್ ಉಡುಪಿ ಇವರುಗಳ ಸಾರಥ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು ಪ್ರಾರಂಭಗೊಂಡಿತು. ೧೦೦೦ ಅಧಿಕ ವಿಪ್ರ ಮಹಿಳೆಯರಿಂದ ಲಲಿತಾ ಸಹಸ್ರ ಕುಂಕುಮಾರ್ಚನೆ ಕಾರ್ಯಕ್ರಮ ನಡೆಯಿತು.
ಧಾರ್ಮಿಕ ಸಭಾ ಕಾರ್ಯಕ್ರಮವನ್ನು ವಿದ್ಯಾವಾಚಸ್ಪತಿ ವಿದ್ವಾನ್ ಉಮಾಕಾಂತ್ ಭಟ್ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿದರು. ಮುಖ್ಯ ಅಭ್ಯಾಗತರಾಗಿ ಸಂಸ್ಕೃತ ವಿದ್ವಾಂಸ ಡಾ. ಕೃಷ್ಣಮೂರ್ತಿ ಬಾಯರಿ, ವಾಸ್ತುತಜ್ಞ ಅವಧಾನಿ ಗುಂಡಿಬೈಲ್ ಸುಬ್ರಹ್ಮಣ್ಯ ಭಟ್, ಪಾರಂಪರಿಕ ಶಿಕ್ಷಣ ತಜ್ಞೆ ಅಮೃತವರ್ಷಿಣಿ ಉಮೇಶ್ ಬೆಂಗಳೂರು, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ವೈ ಸುಧಾಕರ್ ಭಟ್, ಕೋಟ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಗಣೇಶ್ ಭಟ್ ಉಪಸ್ಥಿತರಿದ್ದರು. ಮಹಾಯಾಗ ಸಮಿತಿ ಅಧ್ಯಕ್ಷ ಡಾ.ವಿದ್ವಾನ್ ವಿಜಯ್ ಮಂಜರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಪೂರ್ಣಿಮಾ ಕಮಲಶಿಲೆ, ಸಮಿತಿಯ ಕೆ.ರಾಜಾರಾಮ್ ಐತಾಳ್ ನಿರೂಪಿಸಿದರು. ಯಾಗ ಸಮಿತಿ ಕಾರ್ಯದರ್ಶಿ ಪ್ರಸನ್ನ ಭಟ್ ವಂದಿಸಿದರು. ಸಮಿತಿಯ ಸದಸ್ಯರು ವೇದಘೋಷಗಳನ್ನು ನುಡಿದರು. ಪಲ್ಲವಿ ತುಂಗ ಪ್ರಾರ್ಥನೆ ಸಲ್ಲಿಸಿದರು. ಸಮಿತಿಯ ಜತೆ ಕಾರ್ಯದರ್ಶಿ ದಯಾನಂದ ವಾರಂಬಳ್ಳಿ ಸಹಕರಿಸಿದರು. ಕಾರ್ಯಕ್ರಮದ ನಂತರ ಪ್ರಸಾದ ವಿತರಣೆ ನಡೆಯಿತು.