ಉಡುಪಿ, ಡಿ.27: ಕೈಗಾರಿಕಾ ಪ್ರದೇಶಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳಾದ ರಸ್ತೆ ಸೇರಿದಂತೆ ಮತ್ತಿತರ ಸೇವೆಗಳು ಹಾಗೂ ಸೌಲಭ್ಯಗಳನ್ನು ಒದಗಿಸಿ, ಕೈಗಾರಿಕೆಗಳನ್ನು ಉತ್ತೇಜಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಸೂಚನೆ ನೀಡಿದರು. ಅವರು ಬುಧವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೈಗಾರಿಕಾ ಸ್ಪಂದನ ಸಮಿತಿ ಸಭೆ, ಕ್ಲಸ್ಟರ್ ಸಮಿತಿ ಸಭೆ, ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ, ಜಿಲ್ಲಾ ಮಟ್ಟದ ರಫ್ತು ಉತ್ತೇಜನಾ ಸಮಿತಿ ಸಭೆ ಹಾಗೂ ಪ್ರಧಾನಮಂತ್ರಿಗಳ ಉದ್ಯೋಗ ಸೃಜನಾ ಯೋಜನೆಯ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ಹೊಸ ಕೈಗಾರಿಕಾ ಪ್ರದೇಶ ನಿರ್ಮಾಣ ಕುರಿತು ಹೆಬ್ರಿ ತಾಲೂಕಿನ ಶಿವಪುರ ಹಾಗೂ ಕೆರೆಬೆಟ್ಟು ಗ್ರಾಮಗಳಲ್ಲಿ 113.59 ಎಕ್ರೆ, ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ 50.42 ಎಕ್ರೆ, ಬ್ರಹ್ಮಾವರ ತಾಲೂಕಿನ ಉಪ್ಪೂರಿನಲ್ಲಿ 101.19 ಎಕ್ರೆ ಹಾಗೂ ಉಡುಪಿಯ ಯು.ಪಿ.ಸಿ.ಎಲ್ ಸಂಸ್ಥೆಗೆ 576.45 ಎಕ್ರೆ ಜಮೀನುಗಳನ್ನು ಭೂ ಸ್ವಾಧೀನ ಪ್ರಕ್ರಿಯೆಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ ಹೊಸದಾಗಿ ಕೈಗಾರಿಕೆಗಳ ಸ್ಥಾಪನೆಗೆ ಜಮೀನು ಹಂಚಿಕೆಗಳನ್ನು ತ್ವರಿತವಾಗಿ ಮಾಡಬೇಕೆಂದು ಕೆ.ಐ.ಡಿ.ಬಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಹಿಂದೆ ಹೊಸದಾಗಿ ಕೈಗಾರಿಕಾ ಸ್ಥಾಪನೆಗಳಿಗೆ ಹಂಚಿಕೆಯಾಗಿರುವ ಜಮೀನನ್ನು ಬಳಕೆ ಮಾಡಿಕೊಳ್ಳುವುದರೊಂದಿಗೆ ಹೊಸ ಕೈಗಾರಿಕೆಗಳನ್ನು ನಿರ್ದಿಷ್ಟ ಸಮಯದಲ್ಲಿ ಪ್ರಾರಂಭಿಸಬೇಕೆಂದು ಕೈಗಾರಿಕೋದ್ಯಮಿಗಳಿಗೆ ತಿಳಿಸಿದ ಅವರು, ಕೈಗಾರಿಕೆಗಳನ್ನು ಪ್ರಾರಂಭಿಸದೇ ಇರುವ ಕೈಗಾರಿಕೋದ್ಯಮಿಗಳಿಗೆ ನೋಟೀಸ್ ನೀಡಲು ಸೂಚಿಸಿದರು. ಜಿಲ್ಲೆಯ ಸಣ್ಣ ಕೈಗಾರಿಕೆ ಹಾಗೂ ಮಧ್ಯಮ ಕೈಗಾರಿಕೆಗಳಲ್ಲಿ ಡಾ.ಸರೋಜಿನಿ ಮಹಿಷಿ ವರದಿಯಂತೆ ಡಿ ವರ್ಗದ ಹುದ್ದೆಗಳನ್ನು ಶೇ. 100 ರಷ್ಟು ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು. ಪ್ರಸ್ತುತ ಶೇ. 91 ರಷ್ಟು ಮಾತ್ರ ಕಲ್ಪಿಸಲಾಗಿದೆ. ಇದಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು. ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ ಜಿಲ್ಲೆಗೆ 173 ಗುರಿ ನಿಗಧಿಪಡಿಸಲಾಗಿದ್ದು, ಈವರೆಗೆ 309 ಕ್ಕೂ ಹೆಚ್ಚು ಜನರಿಗೆ ಮಂಜೂರಾಗಿದ್ದು, 34.15 ಕೋಟಿ ರೂ. ನಷ್ಟು ಸಾಲ ನೀಡಲಾಗಿದೆ ಎಂದರು. ಕಾರ್ಕಳ ತಾಲೂಕಿನ ಶಿಲ್ಪಕಲಾ ಕ್ಲಸ್ಟರ್ ಹಾಗೂ ಫರ್ನಿಚರ್ ಕ್ಲಸ್ಟರ್ ಗಳ ಸ್ಥಾಪನೆಗೆ ಅಗತ್ಯವಿರುವ ಜಮೀನನ್ನು ಗುರುತಿಸುವ ಕಾರ್ಯವನ್ನು ಚುರುಕಾಗಿ ಕೈಗೊಂಡು ಕ್ಲಸ್ಟರ್ ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಸೂಚನೆ ನೀಡಿದರು. ಕೈಗಾರಿಕಾ ಪ್ರದೇಶಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಲು ವಿದ್ಯುತ್ ಸಾಮಥ್ಯವನ್ನು ಹೆಚ್ಚಿಸಲು ಮೇಲ್ದರ್ಜೆಗೇರಿಸುವ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಂಡು ಗುಣಮಟ್ಟದ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಉತ್ಪತ್ತಿಯಾಗುವ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡಲು ಉಂಟಾಗುವ ಸಣ್ಣ-ಪುಟ್ಟ ನ್ಯೂನ್ಯತೆಗಳನ್ನು ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಹಾಗೂ ಕಸ್ಟಮ್ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ, ಗೊಂದಲವನ್ನು ಬಗೆಹರಿಸಬೇಕು ಎಂದರು. ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ವಿ ನಾಯಕ್, ಕೆ.ಐ.ಡಿ.ಬಿ ಶ್ರೀನಿವಾಸ ಮೂರ್ತಿ, ಉಪನಿರ್ದೇಶಕ ಸೀತಾರಾಮ ಶೆಟ್ಟಿ, ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಹರೀಶ್ ಕುಂದರ್, ಕಾಸಿಯಾ ಪ್ರತಿನಿಧಿ ಪ್ರಶಾಂತ್ ಬಾಳಿಗಾ ಹಾಗೂ ಮತ್ತಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.